ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಲಿ

16 CRP-1A
Published on

ಚನ್ನರಾಯಪಟ್ಟಣ: ರೈತರು ಬೆಳೆದ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಮೂಲಕ ಅವರ ನೆರವಿಗೆ ಧಾವಿಸಬೇಕು ಎಂದು ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ ಹೇಳಿದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನವೆಂಬರ್‌ನಲ್ಲಿ ಆಯೋಜನೆಗೊಂಡಿರುವ ಸಿಐಟಿಯು 16ನೇ ರಾಜ್ಯ ಸಮ್ಮೇಳನದ ಅಂಗವಾಗಿ ಸಿಐಟಿಯು ಆಯೋಜಿಸಿದ್ದ ತೆಂಗು ಬೆಳೆಗಾರರ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ತುಮಕೂರು, ಹಾಸನ, ಮಂಡ್ಯ ಜಿಲ್ಲೆ ಸೇರಿ 17 ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. 10-12 ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಕೊಬ್ಬರಿ ಮತ್ತು ತೆಂಗು ಬೆಳೆಯ ಖರೀದಿ ಮಾನದಂಡ ಬದಲಾಗಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮತ್ತು ತೆಂಗಿನ ಕಾಯಿಯನ್ನು ವರ್ಷಪೂರ್ತಿ ಖರೀದಿಸುವಂತಾಗಬೇಕು. ಮಾರುಕಟ್ಟೆಯ ಹರಾಜು ಪ್ರಕ್ರಿಯೆ, ಮಾರುಕಟ್ಟೆಯ ಕೌಶಲದ ಬಗ್ಗೆ ರೈತರಿಗೆ ಅರಿವು ಇರಬೇಕು ಎಂದರು.

ತೆಂಗು ಬೆಳೆ ಜತೆ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಆದಾಯ ಹೆಚ್ಚಾಗುತ್ತದೆ. ಕೊಬ್ಬರಿ ಮತ್ತು ತೆಂಗು ಉತ್ಪನ್ನದ ಆಹಾರ ಮೇಳ ಆಯೋಜಿಸಬೇಕು. ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಹೇಳಿದರು.

ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಚೈತನ್ಯ ಕುಮಾರ್ ಮಾತನಾಡಿ, ಗುಣಮಟ್ಟದ ತೆಂಗಿನ ಸಸಿ ತಳಿಗಳನ್ನು ನಾಟಿ ಮಾಡಬೇಕು. ಬೆಳೆಗಾರರಿಗೆ ಸರ್ಕಾರದಿಂದ ಸಾಲ ಸೌಲಭ್ಯ ದೊರಕುವಂತಾಗಬೇಕು. ತೆಂಗು ಇಳುವರಿ ಹೆಚ್ಚಿಸುವ ತಂತ್ರಜ್ಞಾನ ಮತ್ತು ಕೌಶಲ ಕುರಿತು ತಿಳಿವಳಿಕೆ ನೀಡಬೇಕು. ತೆಂಗು ಬೆಳೆಯುವಲ್ಲಿ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

ತೆಂಗು ಬೆಳೆಗಾರರ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ತೆಂಗು ಬೆಳೆಯನ್ನು ಚನ್ನರಾಯಪಟ್ಟಣ ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಗರಿರೋಗ, ಕಾಂಡಕೊರಕ, ಕಪ್ಪುತಲೆ ರೋಗದಿಂದ ಶೇ.50 ಇಳುವರಿ ಕುಂಠಿತವಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಕಿರಣ್, ಸಿಐಟಿಯು ಉಪಾಧ್ಯಕ್ಷ ಎಚ್.ಎಸ್.ಮಂಜುನಾಥ್, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಮೋಹನ್ ಕುಮಾರ್, ವಿಚಾರ ಸಂಕಿರಣ ಸಿದ್ಧತಾ ಸಮಿತಿ ಗೌರವಾಧ್ಯಕ್ಷ ಸಿ.ಆರ್.ಶಂಕರ್, ಪ್ರಧಾನ ಕಾರ್ಯದರ್ಶಿ ಜೆ.ಎನ್.ಚಂದ್ರಹಾಸ, ನಿವೃತ್ತ ಪ್ರಾಂಶುಪಾಲ ಮೇಟಿಕೆರೆ ಹಿರಿಯಣ್ಣ, ಸುಜಾತಾ, ಕರಿಯಪ್ಪ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net