ರೈತರ ಉತ್ಪನ್ನ ಖರೀದಿ ಇಂದಿನಿಂದ

Published on

ಮುಂಡರಗಿ: ಕರೊನಾ ಲಾಕ್​ಡೌನ್​ನಿಂದ ರೈತರು ಬೆಳೆಗಳ ಮಾರಾಟಕ್ಕೆ ಪರದಾಡುತ್ತಿದ್ದಾರೆ. ಅದನ್ನು ನಿವಾರಿಸಲು ಏ. 16ರಿಂದ ಪಟ್ಟಣದ ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಲು ಪ್ರಾರಂಭಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಎಪಿಎಂಸಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟು ನಡೆಸಲು ತಹಸೀಲ್ದಾರ್, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ-ವಹಿವಾಟಿಗೆ ಪ್ರತಿದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಸಮಯ ನಿಗದಿಪಡಿಸಲಾಗಿದೆ. ಅಷ್ಟರೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ಎಪಿಎಂಸಿಗೆ ಬರುವ ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೈತರು, ಹಮಾಲರು, ವ್ಯಾಪಾರಸ್ಥರು, ಖರೀದಿದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಸ್ಯಾನಿಟೈಸರ್​ನಿಂದ ತೊಳೆದುಕೊಳ್ಳಬೇಕು. ಉತ್ಪನ್ನ ಮಾರಾಟಕ್ಕೆ ಒಬ್ಬ ರೈತ ಮಾತ್ರ ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು.

ಎಪಿಎಂಸಿಯಲ್ಲಿನ ಹೋಟೆಲ್​ಗಳನ್ನು ಬಂದ್ ಮಾಡಿಸಲಾಗುತ್ತದೆ. ಆಯಾ ಅಂಗಡಿಗಳ ಮಾಲೀಕರು ಉತ್ಪನ್ನ ಮಾರಾಟಕ್ಕೆ ಬರುವ ಎಲ್ಲ ರೈತರಿಗೆ ಉಪಾಹಾರ ಅಥವಾ ಊಟವನ್ನು ಪಾರ್ಸಲ್ ನೀಡಬೇಕು. ಎಪಿಎಂಸಿ ಪ್ರವೇಶಿಸಿದ ಬಳಿಕ ಎಲ್ಲ ವ್ಯವಹಾರಗಳು ಪೂರ್ಣಗೊಳ್ಳುವವರೆಗೂ ರೈತರು ಎಪಿಎಂಸಿಯಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ಹೊರಗೆ ಹೋಗಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಹೊರ ಜಿಲ್ಲೆಗಳ ರೈತರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಎಪಿಎಂಸಿಗೆ ಬರಬೇಕು. ಎಲ್ಲ ರೈತರೂ ಏಕಕಾಲದಲ್ಲಿ ತಮ್ಮ ಉತ್ಪನ್ನ ಮಾರಾಟ ಮಾಡಲು ಎಪಿಎಂಸಿಗೆ ಬರಬಾರದು. ಖರೀದಿಯ ಒತ್ತಡ ಹೆಚ್ಚಾಗಲಿದ್ದು, ರೈತರು ಎಪಿಎಂಸಿಗೆ ಬರುವುದಕ್ಕಿಂತ ಪೂರ್ವದಲ್ಲಿ ಎಪಿಎಂಸಿ ಕಚೇರಿಯ ದೂರವಾಣಿ ಸಂಖ್ಯೆ 08371-262236 ಅಥವಾ ಕಾರ್ಯದರ್ಶಿ ಮೊಬೈಲ್​ಫೋನ್ ಸಂಖ್ಯೆ 82965 67913 ಹಾಗೂ 99644 69186 ಗೆ ಸಂರ್ಪಸಿ ಮಾಹಿತಿ ಪಡೆದುಕೊಂಡು ಬರಬೇಕು ಎಂದು ತಿಳಿಸಿದರು.

ಎಪಿಎಂಸಿ ಕಾರ್ಯದರ್ಶಿ ದೀಪಾ ಪಾಟೀಲ, ಎಪಿಎಂಸಿ ವರ್ತಕರ ಪ್ರತಿನಿಧಿ ಕೊಟ್ರೇಶ ಅಂಗಡಿ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಈರಣ್ಣ ಬೇವಿನಮರದ, ಉಪಾಧ್ಯಕ್ಷ ಗೌತಮಚಂದ್ ಚೋಪ್ರಾ ಇದ್ದರು.

172 ಅರ್ಜಿದಾರರಿಗೆ ಪಾಸ್ ವಿತರಣೆ

ಗದಗ: ಕರೊನಾ ಲಾಕ್​ಡೌನ್ (ಮಾ. 25ರಿಂದ ಏ. 14ರವರೆಗೆ ) ಅವಧಿಯಲ್ಲಿ ಜನರು ತಮ್ಮ ಕಾರ್ಯಗಳಿಗೆ ತೆರಳಲು ವಾಹನಗಳಿಗೆ ಪಾಸ್ ನೀಡುವಂತೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ 600 ಅರ್ಜಿಗಳಲ್ಲಿ ಅಗತ್ಯವಿದ್ದ 172 ಅರ್ಜಿದಾರರಿಗೆ ಮಾತ್ರ ಪಾಸ್ ವಿತರಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ಸತೀಶ್​ಕುಮಾರ ಎಂ. ನೇತೃತ್ವದ ಅಧಿಕಾರಿಗಳ ತಂಡವು ಈ ಅರ್ಜಿಗಳನ್ನು ಪರಿಶೀಲಿಸಿ ಸಮರ್ಪಕ ಕಾರಣ ನೀಡಿದವರಿಗೆ ಮಾತ್ರ ಪಾಸ್ ವಿತರಿಸಿದೆ.

ಕ್ಯಾನ್ಸರ್-3, ಡಯಾಲಿಸಿಸ್ 4, ಹೆರಿಗೆ-100, ಪವನ ವಿದ್ಯುತ್, ಸೋಲಾರ್ ಪ್ಲಾಂಟ್, ಉದ್ದೇಶಿತ ಕೆಲಸಗಳಿಗಾಗಿ ಒಂದು ದಿನದ ಮಟ್ಟಿಗೆ ರಾಜ್ಯದ ವಿವಿಧ ಜಿಲ್ಲೆಗೆ ತೆರಳುವುದು ಸೇರಿ 172 ಪಾಸ್​ಗಳನ್ನು ವಿತರಿಸಲಾಗಿದೆ. ಅಂತರ ರಾಜ್ಯಗಳಿಗೆ ತೆರಳಲು ಪಾಸ್ ನಿರಾಕರಿಸಲಾಗಿದೆ.

ಆರೋಗ್ಯ, ದಿನಪತ್ರಿಕೆ, ಹಾಲು ವಿತರಣೆ, ಬೀಜ, ರಸಗೊಬ್ಬರ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ಪಾಸ್ ಅವಶ್ಯಕತೆಯಿಲ್ಲ ಎಂದು ಸರ್ಕಾರವೇ ತಿಳಿಸಿದೆ. ಉಳಿದಂತೆ ಹೆರಿಗೆ, ಕ್ಯಾನ್ಸರ್, ಡಯಾಲಿಸಿಸ್, ರಕ್ತ ಸಂಬಂಧಿಗಳ ಅಂತ್ಯಕ್ರಿಯೆಗೆ ತೆರಳಲು ಮಾತ್ರ ಇಲ್ಲಿವರೆಗೆ ಪಾಸ್ ವಿತರಿಸಲಾಗಿದೆ. ಸೂಕ್ತ ಕಾರಣ, ಅವಶ್ಯಕತೆ ಇಲ್ಲದವರು ಸೇರಿ 400ಕ್ಕೂ ಹೆಚ್ಚು ಅರ್ಜಿಗಳನ್ನು ಜಿಲ್ಲಾಡಳಿತವು ತಿರಸ್ಕೃರಿಸಿದೆ. ಕರೊನಾ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೆ, ಲಾಕ್​ಡೌನ್ ವಿಸ್ತರಣೆಯಾಗಿದ್ದರಿಂದ ಸಕಾರಣವಿಲ್ಲದೆ ವಾಹನಗಳ ಸಂಚಾರಕ್ಕೆ ಅನುಮತಿ ಪಾಸ್​ಗಾಗಿ ಸಾರ್ವಜನಿಕರಿಂದ ಅರ್ಜಿ ಸಲ್ಲಿಸುವುದು ಮುಂದುವರಿದಿದೆ.

ಗರ್ಭಿಣಿ ಪತ್ನಿಯನ್ನು ತವರಿಗೆ ಕಳುಹಿಸಲು...

ಜಮೀನಿಗೆ ತೆರಳಲು, ತರಕಾರಿ ಮಾರಾಟ ಹೀಗೆ ಹಲವು ವಿಚಿತ್ರ ಅರ್ಜಿಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿವೆ. ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ತವರು ಮನೆಗೆ ಕಳುಹಿಸಲು ಬ್ಯಾಂಕ್ ಉದ್ಯೋಗಿಯೊಬ್ಬರು ಅರ್ಜಿ ಸಲ್ಲಿಸಿದ್ದರೆ, ಮತ್ತೊಬ್ಬರು ಮನೆ ಶಿಫ್ಟ್ ಮಾಡಲು ಅನುಮತಿ ಪಾಸ್ ನೀಡುವಂತೆ ಅರ್ಜಿ ಹಾಕಿದ್ದಾರೆ. ಇನ್ನುಳಿದಂತೆ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡಲು, ಅಳಿಯನನ್ನು ಕರೆದುಕೊಂಡು ಬರಲು, ಮಕ್ಕಳನ್ನು ರಜೆಗೆ ಅಜ್ಜಿ ಊರಿಗೆ ಕಳುಹಿಸಲು ಅರ್ಜಿಗಳು ಸಲ್ಲಿಕೆಯಾಗಿವೆ. ಗದಗ ನಗರದ ಮಹಿಳೆಯೊಬ್ಬರು ತೆಲಂಗಾಣ ರಾಜ್ಯದ ಸಂಗಾರಡ್ಡಿ ಗ್ರಾಮದಲ್ಲಿ ತಮ್ಮ ಅಜ್ಜಿ ತೀರಿಕೊಂಡಿದ್ದಾರೆ. ಅವರ ಅಂತ್ಯಕ್ರಿಯೆಗೆ ತೆರಳಲು ಪಾಸ್ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ವಾಹನಗಳ ಸಂಚಾರಕ್ಕಾಗಿ ಅನುಮತಿ ನೀಡುವಂತೆ ಜನರು ಸಲ್ಲಿಸಿದ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅವಶ್ಯವಿರುವ ಪ್ರಕರಣಗಳಿಗೆ ಮಾತ್ರ ಪಾಸ್ ವಿತರಿಸಲಾಗಿದೆ.| ಸತೀಶ್​ಕುಮಾರ ಎಂ.

ಅಪರ ಜಿಲ್ಲಾಧಿಕಾರಿ, ಗದಗ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net