

ಬೀದರ್: ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಮೂಲಕ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ವ ಪ್ರಯತ್ನವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಹೇಳಿದರು.
ವಿಶ್ವವಿದ್ಯಾಲಯದಿಂದ ಬರುವ ದಿನಗಳಲ್ಲಿ ತರಬೇತಿ, ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಪಿಜಿ ಡಿಪ್ಲೊಮಾ ಕೋಸ್೯ ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಶು ವೈದ್ಯಕೀಯ, ಪಶು, ಹೈನು ಮತ್ತು ಮೀನುಗಾರಿಕೆ ವಿಜ್ಞಾನಗಳ ಕ್ಷೇತ್ರದಲ್ಲಿ ಶಿಕ್ಷಣ-ಕಲಿಕೆ, ಸಂಶೋಧನೆ, ವಿಸ್ತರಣೆ ಹಾಗೂ ಗ್ರಾಮೀಣ ಆಧಾರಿತ ತಂತ್ರಜ್ಞಾನಗಳನ್ನು ವರ್ಗಾಯಿಸುವ ಧ್ಯೇಯದೊಂದಿಗೆ ಗ್ರಾಮೀಣ ಜನ ಮತ್ತು ರೈತಸ್ನೇಹಿಯಾಗಿ ವಿವಿ ಕೆಲಸ ಮಾಡುತ್ತಿದೆ. ವಿವಿಯಡಿ ಬರುವ ಐದು ಪಶು ವೈದ್ಯಕೀಯ ಮಹಾವಿದ್ಯಾಲಯಗಳು ಭಾರತೀಯ ಪಶು ವೈದ್ಯಕೀಯ ಪರಿಷತ್ ನಿಂದ ಮಾನ್ಯತೆ ಪಡೆದಿವೆ. ಹೊಸದಾಗಿ ಪ್ರಾರಂಭಿಸಿದ ಪಶು ವೈದ್ಯಕೀಯ ಕಾಲೇಜು ಗದಗಕ್ಕೂ ಅನುಮತಿ ಸಿಕ್ಕಿದ್ದು, ಅಥಣಿಯಲ್ಲಿ ಹೊಸದಾಗಿ ಮಹಾವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಡೇರಿ ಉತ್ಪನ್ನಗಳ ತಯಾರಿಕೆಗಾಗಿ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಯ ಮಹಾಗಾಂವ್ನ ಹೈನು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ಟಾರ್ಟಪ್ ಇಂಕುಬೇಷನ್ ಸೆಂಟರ್ ಪ್ರಾರಂಭಿಸುವ ಗುರಿ ಇದೆ. ಅಮೆರಿಕದ ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅಲ್ಲಿನ ಆರು ವಿದ್ಯಾರ್ಥಿಗಳು ಕಲಿಕಾ ತರಬೇತಿಗಾಗಿ ಬೆಂಗಳೂರು ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಆಗಮಿಸಿದ್ದು, ನಮ್ಮ ವಿದ್ಯಾರ್ಥಿಗಳು ಸಹ ಅಲ್ಲಿನ ವಿವಿಗೆ ತೆರಳಲಿದ್ದಾರೆ ಎಂದು ವಿವರಿಸಿದರು.
ಪಶು ವಿವಿಯಿಂದ ವರ್ಷದಲ್ಲಿ 106 ಪಶು ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ 11,670 ಪಶುಗಳಿಗೆ ಚಿಕಿತ್ಸೆ ನೀಡಲಾಗಿದೆ. ರೈತರು ಮತ್ತು ಅಧಿಕಾರಿಗಳ ಸಹಾಯದೊಂದಿಗೆ 2022-23ರಲ್ಲಿ 95 ಆಕಾಶವಾಣಿ ಹಾಗೂ 19 ದೂರದರ್ಶನ ಕಾರ್ಯಕ್ರಮ ನೀಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. 2022-23ರಲ್ಲಿ 45 ಸಂಶೋಧನೆ ಮುಗಿದಿದ್ದು, 72 ಸಂಶೋಧನಾ ಯೋಜನೆಗಳು ಚಾಲ್ತಿಯಲ್ಲಿವೆ. ಸತತ ಪ್ರಯತ್ನದ ಹೊರತಾಗಿಯೂ ದೇವಣಿ ಹಸು ತಳಿಯ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ವಿವಿ ವಿಜ್ಞಾನಿಗಳು ಕ್ಷೇತ್ರ ಮಟ್ಟದ ಪರಿಸ್ಥಿತಿಗಳಲ್ಲಿ ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ ತಂತ್ರಜ್ಞಾನ ಮೂಲಕ ದೇವಣಿ ಜಾನುವಾರುಗಳನ್ನು ಹೆಚ್ಚಿಸುವಲ್ಲಿ ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎನ್ಐಆರ್ಎಫ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ 162 ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಶು ವಿಶ್ವವಿದ್ಯಾಲಯ 37ನೇ ಶ್ರೇಣಿ ಪಡೆದುಕೊಂಡಿದ್ದು, 50ರಿಂದ 37ನೇ ರ್ಯಾಂಕ್ಗೆ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ ಎಂದು ತಿಳಿಸಿದರು.
ವಿವಿ ವಿಸ್ತರಣಾ ನಿರ್ದೇಶಕ ಡಾ.ಎನ್.ಎ. ಪಾಟೀಲ್, ಸಂಶೋಧನಾ ನಿರ್ದೇಶಕ ಡಾ.ಬಿ.ವಿ. ಶಿವಪ್ರಕಾಶ, ಸ್ನಾತಕೋತ್ತರ ಶಿಕ್ಷಣ ಕೇಂದ್ರ ನಿರ್ದೇಶಕ ಡಾ.ದೀಪಕಕುಮಾರ, ಡೀನ್ ಡಾ.ಅಶೋಕ ಪವಾರ್ ಇತರರಿದ್ದರು.