

ವಿಜಯಪುರ: ದೇಶದ ಬೆನ್ನೆಲುಬು ಎಂದು ರೈತರನ್ನು ಕರೆಯಲಾಗುತ್ತದೆ. ಆದರೆ ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದೆ ಆತ ಸಂಕಷ್ಟದಲ್ಲಿದ್ದಾನೆ. ಈ ದೆಸೆಯಲ್ಲಿ ರೈತನಿಗೆ ಬೆಂಬಲ ಬೆಲೆಗಿಂದ ಲಾಭದಾಯಕ ಬೆಲೆ ದೊರಕಬೇಕು ಎಂಬ ಸಂದೇಶವನ್ನು ಇಟ್ಟುಕೊಂಡು ‘ಕ್ಷೇತ್ರಪತಿ’ ಚಲನಚಿತ್ರವನ್ನು ನಿರ್ಮಿಸಿದ್ದು, ಎಲ್ಲರೂ ಚಿತ್ರನೋಡಿ ಪ್ರೋತ್ಸಾಹಿಸಿ ಎಂದು ಚಿತ್ರನಟ ಹರ್ಷ ಅರ್ಜುನ್ ಹೇಳಿದರು.
ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ಕೃಷಿ ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕ್ಷೇತ್ರಪತಿಯಲ್ಲಿ ರೈತನೇ ಕಥಾವಸ್ತುವಾಗಿದ್ದಾನೆ. ಇದೊಂದು ಮಾದರಿ ಪ್ರಯತ್ನ. ತಾನು ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೆ, ಸಂಕಷ್ಟದಲ್ಲಿ ಸಿಲುಕಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಹಲವಾರು ಘಟನೆಗಳನ್ನು ಅವಲೋಕಿಸಿ, ಅತ್ಯುತ್ತಮ ಸಂದೇಶವನ್ನು ಸಮಾಜಕ್ಕೆ ಕೊಡುವ ದೃಷ್ಟಿಯಿಂದ ಈ ಚಿತ್ರ ಮಾಡಲಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದವರೇ ಆದ ಶ್ರೀಕಾಂತ ಕಟಗಿ ಚಲನಚಿತ್ರ, ನಿರ್ದೇಶನದ ಹೊಣೆ ಹೊತ್ತಿದ್ದು, ಇದೇ ಭಾಗದ 90ಕ್ಕೂ ಅಧಿಕ ಕಲಾವಿದರನ್ನು ಗುರುತಿಸಿ, ರೈತನ ಸಂಕಷ್ಟದ ಬದುಕನ್ನು ಮೂಲವಾಗಿಟ್ಟುಕೊಂಡು ಸರ್ಕಾರಕ್ಕೆ ಗಮನ ಸೆಳೆದು ಅವರ ಸಮಸ್ಯೆಗೆ ಪೂರಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಚಿತ್ರ ತಯಾರಾಗಿದೆ. ಚಿತ್ರ ವೀಕ್ಷಿಸಿ ಅಭಿಪ್ರಾಯ ತಿಳಿಸಲು ಕೋರಿದರು.
ಕೃಷಿ ವಿವಿ ಡೀನ್ ಡಾ. ಐ.ಕೆ. ಕಾಳಪ್ಪನವರ ಅಧ್ಯಕ್ಷತೆ ವಹಿಸಿ, ದೃಶ್ಯ ಮಾಧ್ಯಮದ ಮೂಲಕ ರೈತನ ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಚಿತ್ರತಂಡ ಮುಂದಾಗಿದ್ದು ಶ್ಲಾಘನೀಯ. ಜೊತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಿದ್ದು ಅರ್ಥಪೂರ್ಣ ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ಮಹಾಂತೇಶ ತೆಗ್ಗಿ, ಡಾ. ಶ್ರೀಶೈಲ ಗೋಟ್ಯಾಳ, ಡಾ. ಎಸ್.ಜಿ. ಅಸ್ಕಿ, ಡಾ. ಜಿ. ಶ್ರೀನಿವಾಸಲು, ಡಾ. ಎಸ್.ಹೆಚ್. ಗುತ್ತರಗಿ, ಡಾ. ಕಾಶಿಬಾಯಿ ಖೇಡಗಿ, ವಿದ್ಯಾರ್ಥಿನಿ ಪ್ರಿಯಾಂಕಾ, ಶ್ವೇತಾ, ಮಹಾವಿದ್ಯಾಲಯದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.