

ಹನೂರು: ತಾಲೂಕಿನ ಕಗ್ಗಲಿಗುಂದಿ ಸೋಲಿಗರ ಗ್ರಾಮದಲ್ಲಿ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದ ಬೆನ್ನಲ್ಲೇ ಮಂಗಳವಾರ ರಾತ್ರಿ ಗುಂಡಾಲ್ ಜಲಾಶಯದ ಸಮೀಪದಲ್ಲಿರುವ ಕಂಚಗಳ್ಳಿ ಗ್ರಾಮದ ಜಮೀನಿನಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.
ಕಂಚಗಳ್ಳಿ ಗ್ರಾಮದ ನಂಜಪ್ಪ (52) ಎಂಬವರೇ ಗಾಯಗೊಳಗಾದ ರೈತ. ಈತ ಗ್ರಾಮದ ಹೊರವಲಯದಲ್ಲಿ ಜಮೀನನ್ನು ಹೊಂದಿದ್ದು, ಮುಸುಕಿನ ಜೋಳದ ಫಲಸನ್ನು ಬೆಳೆದಿದ್ದರು. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹಿನ್ನ್ನೆಲೆಯಲ್ಲಿ ಕಾವಲು ಕಾಯಲು ಜಮೀನಿಗೆ ತೆರಳಿದ್ದು, ಗುಡಿಸಲಿನಲ್ಲಿ ಮಲಗಿದ್ದರು. ರಾತ್ರಿ ಸುಮಾರು 9 ಗಂಟೆಯಲ್ಲಿ ಗುಡಿಸಲಿಗೆ ನುಗ್ಗಿದ ಚಿರತೆ ನಂಜಪ್ಪ ಅವರ ತೋಳನ್ನು ಪರಚಿದೆ. ಎಚ್ಚರಗೊಂಡ ನಂಜಪ್ಪ ಚಿರತೆ ಕಂಡು ಭಯಭೀತರಾಗಿ ದೊಣ್ಣೆಯಿಂದ ಗದರಿಸಿದಾಗ ಚಿರತೆ ಅಲ್ಲಿಂದ ಕಾಡಿನತ್ತ ಓಟ ಕಿತ್ತಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಗಾಯಾಳು ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಸುದ್ದಿ ತಿಳಿದು ಬುಧವಾರ ಡಿವೈಎಸ್ಪಿ ಸೋಮೇಗೌಡ, ಇನ್ಸ್‌ಪೆಕ್ಟರ್ ಶಶಿಕುಮಾರ್, ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಣೇಶ್, ಡಿಆರ್‌ಎಫ್‌ಒ ಪ್ರಭುಸ್ವಾಮಿ ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುವಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅಗತ್ಯ ಮುಂಜಾಗ್ರತೆ ವಹಿಸಿದ್ದಾರೆ.