

ಬೂದಿಕೋಟೆ: ತರಕಾರಿ ಹಾಗೂ ವಾಣಿಜ್ಯ ಬೆಳೆಗಳ ಜತೆ ಪರ್ಯಾಯ ಬೆಳೆಯಾಗಿ ಬೆಳೆದಿರುವ ವೀಳ್ಯದೆಲೆ ಸಂಕಷ್ಟದಲ್ಲಿರುವ ಅನ್ನದಾತನ ಕೈ ಹಿಡಿದಿದೆ. ಕೋಲಾರ ಜಿಲ್ಲೆಯ ರೈತರು ಟೊಮ್ಯಾಟೊ ಜತೆಗೆ ಇತರ ತರಕಾರಿ ಬೆಳೆದು ಸೂಕ್ತ ಬೆಲೆ ಇಲ್ಲದೆ ಕೈ ಸುಟ್ಟುಕೊಂಡಿರುವ ಸಮಯದಲ್ಲಿ ಗಡಿಭಾಗದ ಗ್ರಾಮಗಳ ರೈತರು ಬೆಳೆದ ವೀಳ್ಯದೆಲೆ ಜೀವನೋಪಾಯಕ್ಕೆ ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಲಕ್ಷಾಂತರ ರೂ. ಬಂಡವಾಳ ಹಾಕಿ ಟೊಮ್ಯಾಟೊ ಬೆಳೆಯುತ್ತಾರೆ. ಮಾರುಕಟ್ಟೆಯಲ್ಲಿ ಧರ ಏರಿಳಿತ ಕಂಡು ಹಾಕಿದ ಬಂಡವಾಳ ಹಿಂಪಡೆಯಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಮೂತನೂರು, ಬೊಪ್ಪನಹಳ್ಳಿ, ದೋಣಿಮಡಗು, ಮುಷ್ಟ್ರಹಳ್ಳಿ, ಕಳವಂಚಿ, ಮಲ್ಲೇಶನಪಾಳ್ಯ ಸೇರಿ ಗಡಿಭಾಗದ ಹಲವು ಗ್ರಾಮದ ರೈತರು ಪರ್ಯಾಯ ಬೆಳೆಯಾಗಿ ವೀಳ್ಯೆದೆಲೆ ಬೆಳೆ ಆರಿಸಿಕೊಂಡಿದ್ದು, ರೈತರ ಹೊಟ್ಟೆ ತುಂಬಿಸಲು ಆಸರೆಯಾಗಿದೆ.
ಖರ್ಚು ಕಡಿಮೆ: ಕಡಿಮೆ ಜಾಗದಲ್ಲಿ ವೀಳ್ಯದೆಲೆ ತೋಟ ಮಾಡಿಕೊಳ್ಳಬಹುದಾಗಿದ್ದು, ರೋಗ ಅಷ್ಟಾಗಿ ಕಾಣಿಸಿಕೊಳ್ಳದ ಕಾರಣ ನಿರ್ವಹಣೆ ಮತ್ತು ಕರ್ಚು ಸಹ ಕಡಿಮೆ. ವರ್ಷದ 365 ದಿನವೂ ವೀಳ್ಯದೆಲೆಗೆ ಬೇಡಿಕೆ ಇರುವ ಕಾರಣ ಬೆಲೆ ಸಹ ಚೆನ್ನಾಗಿರುತ್ತದೆ. ಕಾರ್ತಿಕ ಹಾಗೂ ಶ್ರಾವಣ ಮಾಸದಲ್ಲಿ ಮದುವೆ, ಮುಂಜಿ ಹಾಗೂ ಇತರ ಶುಭಸಮಾರಂಭ ನಡೆಯುವ ಕಾರಣ ಬೇಡಿಕೆ ಹಾಗೂ ಬೆಲೆ ಹೆಚ್ಚಾಗುತ್ತದೆ. ಪ್ರತಿ ಕಟ್ಟಿಗೆ (100 ಎಲೆ) 40 ರಿಂದ 60 ರೂ.ವರೆಗೆ ಮಾರಾಟವಾಗುತ್ತದೆ.
60 ವರ್ಷ ಫಲ: ಬೇಸಿಗೆ, ಮಳೆಗಾಲ, ಚಳಿಗಾಲ ಎನ್ನದೆ ಎಲ್ಲ ಕಾಲದಲ್ಲೂ ತಿಂಗಳಿಗೆ ಒಂದು ಭಾರಿ ಎಲೆ ಕಟಾವಿಗೆ ಬರುತ್ತದೆ. ಚೆನ್ನಾಗಿ ಬೆಳೆದ ಒಂದು ಎಕರೆ ತೋಟದಲ್ಲಿ ಒಂದು ಲಕ್ಷ ಎಲೆಗಳನ್ನು ಕೊಯ್ಲು ಮಾಡಬಹುದಾಗಿದ್ದು, ಸೋಂಪಾಗಿ ಬೆಳೆದ ಹಂಬು 60 ವರ್ಷ ಫಲ ಕೊಡುತ್ತದೆ.
ತಮಿಳುನಾಡಿಗೆ ರಪ್ತು: ನಾಟಿ ವೀಳ್ಯದೆಲೆಗೆ ತಮಿಳುನಾಡಿನಲ್ಲಿ ಬೇಡಿಕೆ ಇರುವ ಕಾರಣ ಈರೋಡ್, ಭವಾನಿ ಇತರ ನಗರಗಳಿಗೆ ಕೆಲವು ರೈತರು ಹೆಚ್ಚಿನ ಬೆಲೆಗೆ ರಪ್ತು ಮಾಡುತ್ತಾರೆ. ಮದುವೆ ಸಮಯದಲ್ಲಿ ಸ್ಥಳೀಯ ಜನರು ತೋಟಗಳಿಗೆ ಬಂದು ಎಲೆ ಖರೀದಿ ಮಾಡುತ್ತಿರುತ್ತಾರೆ. ಇದರಿಂದ ಸಾಗಾಣಿಕೆ ವೆಚ್ಚದ ಭಯವಿಲ್ಲದೆ ಆದಾಯ ಗಳಿಸಬಹುದು.
25 ಸಾವಿರದಲ್ಲಿ ನಾಟಿ: ಒಂದು ಎಕರೆಗೆ ವೀಳ್ಯದೆಲೆ ಬೆ ೆಗೆ ನಾಲ್ಕು ಲೋಡ್ ಗೊಬ್ಬರ, ಮರಳು ಮಿಶ್ರಿತ ಎಂಟು ಲೋಡ್ ಮಣ್ಣು ಬೇಕಾಗಿದ್ದು, ಕೂಲಿ ವೆಚ್ಚ ಸೇರಿ ಸುಮಾರು 25 ಸಾವಿರ ವೆಚ್ಚದಲ್ಲಿ ನಾಟಿ ಮಾಡಬಹುದು. ಬೆಳೆದಂತೆ ಪ್ರತಿ ದಿನ ಅಂಬು ಕಟ್ಟಲು ಹಾಗೂ ಇತರೆ ಕೆಲಸಗಳಿಗೆ ಇಬ್ಬರು ಕೆಲಸಗಾರರು ಅವಶ್ಯಕತೆ ಇದ್ದು, ವರ್ಷಕ್ಕೆ ಒಮ್ಮೆ ಬಳ್ಳಿ ಇಳಿಸುವಾಗ ಸುಮಾರು ಒಂದು ಲಕ್ಷದಷ್ಟು ಖರ್ಚಾಗಬಹುದು.
ಅರ್ಧ ಎಕರೆಯಲ್ಲಿ ವೀಳ್ಯದೆಲೆ ಬೆಳೆದಿದ್ದು, ಕಳೆದ ವರ್ಷ ಸುಮಾರು ಮೂರು ಲಕ್ಷದಷ್ಟು ಆದಾಯ ಬಂದಿತ್ತು. ಈ ವರ್ಷ ಬೆಲೆ ಸ್ವಲ್ಪ ಕುಸಿತಗೊಂಡು ತಿಂಗಳಿಗೆ ಹತ್ತು ಸಾವಿರದಷ್ಟು ಆದಾಯ ಬರುತ್ತಿದೆ. ಕರೊನಾಗಿಂತ ಮುಂಚೆ 80ರಿಂದ 100 ರೂ.ಗೆ ತಮಿಳುನಾಡಿನ ಈರೋಡ್, ಭವಾನಿ ಸೇರಿ ಇತರೆಡೆ ರಪ್ತು ಮಾಡಲಾಗುತ್ತಿದ್ದು, ಈಗ ಸ್ಥಳೀಯವಾಗಿಯೇ ಬೇಡಿಕೆ ಇರುವುದರಿಂದ ರಪ್ತು ನಿಲ್ಲಿಸಿದ್ದೇವೆ. ವೆಂಕಟೇಶ್, ಮೂತನೂರು ರೈತ ವೀಳ್ಯದೆಲೆಗೆ ವರ್ಷಪೂರ್ತಿ ಬೇಡಿಕೆಯೊಂದಿಗೆ ಉತ್ಪಾದನೆ ಸಹ ಇರುವುದರಿಂದ ರೈತರು ಇತರ ಬೆಳೆಗಳ ಜತೆ ಪರ್ಯಾಯ ಬೆಳೆಯಾಗಿ ಬೆಳೆಯಬಹುದು. ಇಡೀ ನಮ್ಮ ಕುಟುಂಬವನ್ನು ವೀಳ್ಯದೆಲೆ ಮಾರಾಟದಿಂದ ನಿರ್ವಹಣೆ ಮಾಡುತ್ತಿದ್ದೇನೆ. ರಾಜ, ರೈತ ಮಲ್ಲೇಶನಪಾಳ್ಯ