ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

Oplus_131072
ತಾಲೂಕಿನ ಹೆಡತಲೆ, ಹೆಮ್ಮರಗಾಲ, ಕುಂಬ್ರಳ್ಳಿ ವ್ಯಾಪ್ತಿಯ ಹಳೇ ಗುಂಡ್ಲು ಚೆನ್ನಯ್ಯನಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಹಾಗೂ ವ್ಯಾಪ್ತಿಯ ಗ್ರಾಮಸ್ಥರು ಕೆರೆ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಮಹೇಶ್, ಎ.ಸಿ.ಕೃಷ್ಣ , ರಂಗನಾಥ್, ಸುಹಾಸ್, ಸೋಮಣ್ಣ, ಕೃಷ್ಣಕಾಂತ ಕೋಳಿವಾಡ, ಡಿಸೋಜ, ದೊರೆಸ್ವಾಮಿ ನಾಯಕ, ಕೆ.ನಾಗರಾಜು, ಮರಿಸಿದ್ದನಾಯಕ, ಪುಟ್ಟರಾಜು, ಸತೀಶ್, ಇಮ್ಮವು ರಘು, ನಾಗೇಶ್, ರವಿ ಇತರರು ಇದ್ದರು.
Published on

ನಂಜನಗೂಡು: ತಾಲೂಕಿನ ಹೆಡತಲೆ, ಹೆಮ್ಮರಗಾಲ, ಕುಂಬ್ರಳ್ಳಿ ವ್ಯಾಪ್ತಿಯ ಹಳೇ ಗುಂಡ್ಲು ಚೆನ್ನಯ್ಯನಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಹಾಗೂ ಆ ವ್ಯಾಪ್ತಿಯ ಗ್ರಾಮಸ್ಥರು ಕೆರೆ ಆವರಣದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಕೆರೆ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು, 19 ಎಕರೆ ಪ್ರದೇಶದಲ್ಲಿ ಹಳೇ ಗುಂಡ್ಲು ಚೆನ್ನಯ್ಯನಕೆರೆ ಇದ್ದು, ಕಪಿಲಾ ನದಿಯಿಂದ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿದರು. ಈ ಕೆರೆಯ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ವೇಳೆಗೆ ಜನ-ಜಾನುವಾರು ಪರದಾಡುವಂತಾಗುತ್ತದೆ. ಕೆರೆಗೆ ನೀರು ತುಂಬಿಸುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ತಾಲೂಕು ಆಡಳಿತ ಮತ್ತು ನೀರಾವರಿ ಇಲಾಖೆಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಕೌಲಂದೆ ಹೋಬಳಿ ವಾಪ್ತಿಗೆ ಸೇರುವ ಕೆರೆ ಇದ್ದಾಗಿದೆ. ಕೌಲಂದೆ ಹೋಬಳಿ ಬರಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಸಾಕಷ್ಟು ಕೆರೆಗಳಿಗೆ ಇನ್ನೂ ಕೂಡ ನೀರು ಕಪಿಲಾ ನದಿಯಿಂದ ಸರ್ಕಾರ ತುಂಬಿಸುವ ಕೆಲಸ ಮಾಡಿಲ್ಲ. ಕಳೆದ ತಿಂಗಳು ಈ ಕೆರೆಗೆ ನೀರು ತುಂಬಿಸುವಂತೆ ಹೋರಾಟದ ಎಚ್ಚರಿಕೆ ನೀಡಿದ್ದೆವು. ಇದನ್ನು ಪರಿಗಣಿಸಿದ ಸರ್ಕಾರ ಮತ್ತು ನೀರಾವರಿ ಇಲಾಖೆ ಕಳೆದ ತಿಂಗಳು ಈ ಭಾಗದ 15 ಕೆರೆಗಳಿಗೆ 90 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿತು. ಆದರೆ ಗುತ್ತಿಗೆದಾರರ ಕಿತ್ತಾಟದಿಂದ ಯೋಜನೆಯು ವಿಳಂಬವಾಗಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಿಂದ ಈ ಗೊಂದಲ ನಿವಾರಣೆಯಾಗುವರೆಗೂ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಧರಣಿನಿರತರನ್ನು ಮನವೊಲಿಸುವ ಕೆಲಸವನ್ನು ಮಾಡಿದರೂ ಕೆರೆಗೆ ನೀರು ತುಂಬಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಗೊಂದಲ ಇರುವ ಕಾರಣ ಪ್ರತಿಭಟನೆ ಕೈ ಬಿಡುವುದಿಲ್ಲ. ಸ್ಥಳಕ್ಕೆ ಸ್ಥಳೀಯ ಶಾಸಕರು ಬಂದು ಈ ಗೊಂದಲ ಪರಿಹರಿಸುವ ಭರವಸೆ ನೀಡುವವರೆಗೂ ಧರಣಿ ಮುಂದುವರಿಸುವುದಾಗಿ ಹೋರಾಟಗಾರರು ಪಟ್ಟುಹಿಡಿದರು.

ನೀರಾವರಿ ಇಲಾಖೆ ಅಧಿಕಾರಿಗಳಾದ ಮಹೇಶ್, ಎ.ಸಿ.ಕೃಷ್ಣ, ರಂಗನಾಥ್, ಸುಹಾಸ್, ಸೋಮಣ್ಣ, ಕೌಲಂದೆ ಪೊಲೀಸ್ ಠಾಣೆ ಪಿಎಸೈ ಕೃಷ್ಣಕಾಂತ ಕೋಳಿವಾಡ, ರಾಜಸ್ವ ನಿರೀಕ್ಷಕ ಡಿಸೋಜ, ಮುಖಂಡರಾದ ದೊರೆಸ್ವಾಮಿ ನಾಯಕ, ಕೆ.ನಾಗರಾಜು, ಮರಿಸಿದ್ದನಾಯಕ, ಪುಟ್ಟರಾಜು, ಸತೀಶ್, ಇಮ್ಮವು ರಘು, ನಾಗೇಶ್, ರವಿ, ಮಾದನಾಯಕ ಸೇರಿದಂತೆ ಹೆಡತಲೆ, ಕುಂಬರಳ್ಳಿ, ಹೆಮ್ಮರಗಾಲ ಗ್ರಾಮಸ್ಥರು ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net