ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

oppo_2
ವಕ್ಫ್ ಕಮಿಟಿ ಕ್ರಮದ ವಿರುದ್ಧ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮದ್ದೂರು ಪಟ್ಟಣದ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘದ ಕಾರ್ಯಕರ್ತರು ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಾ.ಸ್ಮಿತಾ ರಾಮು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಣ್ಣೂರು ಮಹೇಂದ್ರ, ಸೊ.ಶಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಪ್ರಭುಲಿಂಗ, ಕುದರಗುಂಡಿ ನಾಗರಾಜು, ವೆಂಕಟೇಶ್, ರಾಮಣ್ಣ, ಮುದ್ದೇಗೌಡ, ರಮೇಶ್, ಮರಲಿಂಗ, ರಾಮಕೃಷ್ಣಯ್ಯ ಇದ್ದರು.
Published on

ಮದ್ದೂರು: ರಾಜ್ಯದ ರೈತರು, ಹಿಂದುಗಳ ದೇವಾಲಯಗಳ ಹಾಗೂ ಮಠಗಳ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿರುವ ವಕ್ಫ್ ಕಮಿಟಿ ಕ್ರಮದ ವಿರುದ್ಧ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮದ್ ವಿರುದ್ಧ ಘೋಷಣೆಗಳ ಕೂಗಿದ ಪ್ರತಿಭಟನಾಕಾರರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು, ಹಿಂದುಗಳ ಹಾಗೂ ಮಠಗಳ ಜಮೀನುಗಳನ್ನು ಕಬಳಿಸುವ ಹುನ್ನಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ವಕ್ಫ್ ಕಮಿಟಿ ರೈತರ ಜಮೀನು, ದೇಗುಲಗಳು ಹಾಗೂ ಮಠದ ಜಾಗವನ್ನು ಕಬಳಿಸಲು ಮುಂದಾಗಿರುವುದು ಸರಿಯಲ್ಲ. ಈ ಕೂಡಲೇ ಸರ್ಕಾರ ಈ ಸಂಬಂಧ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ತಾಲೂಕಿನಲ್ಲಿ ಒಟ್ಟು 80,145 ಕಾಡುಗಳಿದ್ದು, ಬಿಪಿಎಲ್ ಕಾರ್ಡುಗಳ ಸಂಖ್ಯೆ 74,177, ಅಂತ್ಯೋದಯ 5,968 ಕಾರ್ಡುಗಳಿದ್ದು, ಇದರಲ್ಲಿ 971 ಬಿಪಿಎಲ್ ಕಾರ್ಡುಗಳು ಹಾಗೂ 51 ಅಂತ್ಯೋದಯ ಕಾರ್ಡುಗಳು ರದ್ದಾಗಿದೆ. ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಪ್ರತಿ ವಿಭಾಗದಲ್ಲಿ ಅಧಿಕಾರಿಗಳು ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ. ಲಂಚ ಕೊಡದಿದ್ದರೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಮರ್ಪಕವಾಗಿ ರೈತರು ಹಾಗೂ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ಇದರಿಂದ ಜನರು ಹಾಗೂ ರೈತರು ರೋಸಿ ಹೋಗಿದ್ದಾರೆ. ಈ ಕೂಡಲೇ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸಂಬಂಧಿಸಿದ ಅಧಿಕಾರಿಗಳು ನಿಲ್ಲಿಸಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ರೈತ ಸಂಘದ ವತಿಯಿಂದ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಡಾ.ಸ್ಮಿತಾ ರಾಮು ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಮುಖರಾದ ಪ್ರಭುಲಿಂಗ, ಕುದರಗುಂಡಿ ನಾಗರಾಜು, ವೆಂಕಟೇಶ್, ರಾಮಣ್ಣ, ಮುದ್ದೇಗೌಡ, ರಮೇಶ್, ಮರಲಿಂಗ, ರಾಮಕೃಷ್ಣಯ್ಯ, ಪುಟ್ಟಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net