ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

11-AUG-GPT-2
Published on

ಗುಂಡ್ಲುಪೇಟೆ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಮುಖಂಡ ಹೊನ್ನೂರು ಬಸವಣ್ಣ ನೇತೃತ್ವದಲ್ಲಿ ಬೈಕ್ ಹಾಗೂ ಟ್ರಾೃಕ್ಟರ್‌ಗಳ ಜತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು, ತಾಲೂಕು ಕಚೇರಿ ಎದುರು ಸಮಾವೇಶಗೊಂಡರು. ತಾಲೂಕಿನ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಓಂಕಾರ ವಲಯದಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಂದಕದ ಹೂಳೆತ್ತಬೇಕು. ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು. ತಮ್ಮ ಜಮೀನುಗಳಿಗೆ ಹೋಗಲು ದಾರಿಯಿಲ್ಲದೇ ಇರುವ ರೈತರಿಗೆ ಸರ್ಕಾರಿ ಜಾಗದಲ್ಲಿ ದಾರಿ ಗುರುತಿಸಿಕೊಡಬೇಕು. ಕೆ.ಇ.ಬಿ.ಸ್ಮಾರ್ಟ್‌ಮೀಟರ್ ಅಳವಡಿಸಲು ಹುನ್ನಾರ ನಡೆಸುತ್ತಿದ್ದು, ಕೂಡಲೇ ಇದನ್ನು ಕೈ ಬಿಡಬೇಕು. ಸಣ್ಣ ನೀರಾವರಿ ಇಲಾಖೆ ತಾಲೂಕಿನ ಕೆರೆಗಳಲ್ಲಿ ಹೂಳೆತ್ತಿಸಬೇಕು. ಕೃಷಿ ಚಟುವಟಿಕೆಗೆ ರೈತರು ಬ್ಯಾಂಕುಗಳಲ್ಲಿ ಅಡವಿಟ್ಟಿರುವ ಚಿನ್ನಕ್ಕೆ ವರ್ಷಕ್ಕೊಮ್ಮೆ ಅಸಲು ಮತ್ತು ಬಡ್ಡಿ ಕಟ್ಟಬೇಕೆಂದು ಕಿರುಕುಳ ನೀಡುತ್ತಿದ್ದು, ಬಡ್ಡಿಯನ್ನು ಮಾತ್ರ ಕಟ್ಟಿಸಿಕೊಂಡು ನವೀಕರಿಸಬೇಕು. ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಕಂದಾಯ ಭೂವಿಯನ್ನು ದುರಸ್ತಿಗೊಳಿಸಿ ಪೋಡಿ ಗ್ರಾಮ ಮಾಡಬೇಕು, ನಂದಿನಿ ಹಾಲನ್ನು ಗ್ರಾಹಕರಿಗೆ 50 ರೂ.ಗೆ ಮಾರಾಟ ಮಾಡುತ್ತಿದ್ದರೂ ರೈತರಿಗೆ ಕೇವಲ 34 ರೂ.ಕೊಡುತ್ತಿದ್ದಾರೆ. ಕೂಡಲೇ ರೈತರಿಗೆ ಹೆಚ್ಚು ಹಣ ನೀಡಬೇಕು. ಟೋಲ್‌ಗಳಲ್ಲಿ ಸ್ಥಳಿಯ ರೈತರಿಂದ ಹಣ ವಸೂಲಿ ಮಾಡುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗ್ರಾಮಘಟಕಗಳ ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net