ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ

ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ
Published on

ಬೇಲೂರು : ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಿ, ವಿದ್ಯುತ್‌ಚಕ್ತಿ ಇಲಾಖೆಯ ಖಾಸಗಿಕರಣಕ್ಕೆ ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿ, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಮಳೆಯ ನಡುವೆಯೇ ತಾಲೂಕು ಕಚೇರಿ ಮುಂದೆ ಅನಿರ್ಧಿಷ್ಟಾವದಿ ಪ್ರತಿಭಟನೆ ಮುಂದುವರಿಸಿದ್ದಾರೆ.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ರೈತರ ಹಾಗೂ ಕಾಫಿ ಬೆಳೆಗಾರರ ಪಂಪ್ ಸೆಟ್‌ಗಳಿಗೆ ಅನಗತ್ಯ ಬಿಲ್‌ನೊಂದಿಗೆ ದಂಡ, ಜತೆಗೆ ಬಡ್ಡಿ ಕಟ್ಟುವಂತೆ ಒತ್ತಾಯಿಸಿ ಅಧಿಕಾರಿಗಳು ಶೋಷಣೆ ಮಾಡುತಿದ್ದಾರೆ. ಮಲೆನಾಡು ಭಾಗದಲ್ಲಿ ವಿಜಿಲೆನ್ಸ್ ವಿಭಾಗದವರು ಕಾಫಿ ಬೆಳೆಗಾರರನ್ನು ಬೆದರಿಸುವ ಕೆಲಸ ಆಗುತ್ತಿದೆ. ಸರ್ಕಾರ ಕಾಫಿ ಬೆಳೆಗಾರರಿಗೆ 10 ಹೆಚ್‌ಪಿವರಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದರೂ, ಇದೀಗ ಡೈರೆಕ್ಟರ್ ಬೆನಿಫಿಟ್ ಟ್ರಾನ್ಸ್‌ಫರ್(ಡಿಬಿಟಿ)ಹೆಸರಿನಲ್ಲಿ ಯೋಜನೆ ಜಾರಿಗೆ ತಂದು ಬಾಕಿ ಬಿಲ್ಲನ್ನು ಪಾವತಿಸುವಂತೆ ತಿಳಿಸಲಾಗುತ್ತಿದೆ. ಇದನ್ನು ತಕ್ಷಣವೆ ರದ್ಧು ಪಡಿಸಬೇಕು. ರೈತರು ಯಾವುದೇ ಕಾರಣಕ್ಕೂ ದಂಡ, ಬಡ್ಡಿ, ಶುಲ್ಕ ಪಾವತಿಸುವುದಿಲ್ಲ. 10 ಹೆಚ್‌ಪಿಗಿಂತ ಅಧಿಕ ವಿದ್ಯುತ್ ಬಳಕೆ ಮಾಡಿದರೆ ಮೀಟರ್ ಅಳವಡಿಸಲು ನಮ್ಮ ಸಹಮತವಿದೆ. ಇದಕ್ಕೂ ಮೀರಿ ಮೀಟರ್ ಅಳವಡಿಸಿದರೆ ಅಂತಹ ಮೀಟರ್‌ಗಳನ್ನು ಕಿತ್ತು ಹಾಕುತ್ತೇವೆ. ಬಯಲು ಪ್ರದೇಶದ ರೈತರು ಮೀಟರ್ ಹಾಕಲು ವಿರೋಧಿಸಿದ್ದಾರೆ.

ಆದರೆ ಕಾಫಿ ಬೆಳೆಗಾರರು ವಿದ್ಯುತ್ ಇಲಾಖೆಯವರ ಮಾತನ್ನು ನಂಬಿ ಮೀಟರ್ ಹಾಕಿಸಿ ಕೊಂಡಿದ್ದರ ಪರಿಣಾಮ ಇಂದು 2 ರಿಂದ 5 ಲಕ್ಷದವರಗೆ ಬಾಕಿ ಶುಲ್ಕ ಪಾವತಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡದೆ, ವೈಜ್ಞಾನಿಕ ಬೆಲೆ ನಿಗಧಿಪಡಿಸದೆ, ಕಾಡಾನೆ ಸಮಸ್ಯೆ ಬಗೆಹರಿಸದಿದ್ದರೂ ಶುಲ್ಕ ವಿಧಿಸುತ್ತಿರುವುದನ್ನು ರೈತ ಸಂಘ ವಿರೋಧಿಸುತ್ತದೆ. ಅಲ್ಲದೆ ರೈತರು ಮೀಟರ್ ಅನ್ನು ಕಿತ್ತು ಹಾಕಬೇಕು. ಸೆಸ್ಕ್ ಮುಖ್ಯ ಎಂಜಿನಿಯರ್ ಬಂದು ವಿದ್ಯುತ್‌ಚಿಕ್ತಿ ಖಾಸಗೀಕರಣ ಮಾಡುವುದಿಲ್ಲವೆಂಬ ಸೂಕ್ತ ಭರವಸೆ ಕೊಡುವವರಿಗೆ ನಾವೂ ಹೋರಾಟ ಮುಂದುವರಿಸುತ್ತೇವೆ ಎಂದರು.


ರೈತ ಸಂಘದ ತಾಲೂಕು ಅಧ್ಯಕ್ಷ ಬೋಗಮಲ್ಲೇಶ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ವಿರೋಧಿ ನೀತಿ ಅನುಸರಿಸುತಿವೆೆ. ವಿದ್ಯುತ್ ಅನ್ನು ಕೃಷಿಗಾಗಿ ರೈತರು ಬಳಸುತ್ತಿದ್ದು ಆಡಂಬರಕ್ಕಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಆಹಾರ ಉತ್ಪಾದಿಸುವ ರೈತರಿಗೆ ವಿನಾಕಾರಣ ತೊಂದರೆ ಕೊಡಬಾರದು. ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದಿದ್ದರೂ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಹೇಳುತ್ತಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಕಲೇಶಪುರ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅರ್ಜುನ್‌ರನ್ನು ವಾಪಸ್ ಕಳುಹಿ ಸೆಸ್ಕ್‌ನ ಮುಖ್ಯ ಎಂಜಿನಿಯರ್ ಬರದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದು ಮಳೆಯ ನಡುವೆಯೇ ಪ್ರತಿಭಟನೆ ಮುಂದುವರಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಸಂಘದ ಚಂದ್ರಶೇಖರ್, ಸಚಿನ್, ಮೋಕ್ಷರಾಜು, ಲಿಂಗೇಗೌಡ, ಬಸವರಾಜು, ಕರ್ಕಿಹಳ್ಳಿ ರಮೇಶ್, ಧರ್ಮೇಗೌಡ, ಗೆಂಡೇಹಳ್ಳಿ ಶ್ರೀನಿವಾಸ್ ಸೇರಿದಂತೆ ಇತರರು ಬಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net