

ವಿಜಯವಾಣಿ ಸುದ್ದಿಜಾಲ ಬೀದರ್
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿ ರೈತ ವಿರೋಧಿ ಮಸೂದೆಗಳ ಹಿಂಪಡೆಗೆ ಆಗ್ರಹಿಸಿ ರೈತ ಸೇರಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಜಿಲ್ಲೆಯಲ್ಲಿ ಬೆಂಬಲ ಸಿಗಲಿಲ್ಲ. ನಗರ ಸೇರಿ ವಿವಿಧೆಡೆ ಬಂದ್ ಕೇವಲ ಪ್ರತಿಭಟನೆಗೆ ಸೀಮಿತವಾಗಿತ್ತು.
ಬೀದರ್ ನಗರ ಸೇರಿ ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಔರಾದ್, ಚಿಟಗುಪ್ಪ, ಹುಲಸೂರು, ಕಮಲನಗರ ತಾಲೂಕು ಕೇಂದ್ರ ಒಳಗೊಂಡಂತೆ ಎಲ್ಲೆಡೆ ಎಂದಿನಂತೆ ಜನಜೀವನ ಸಾಮಾನ್ಯವಾಗಿತ್ತು. ಬಸ್ ಸಂಚಾರ ಸುಗಮವಾಗಿತ್ತು. ಹೋಟೆಲ್, ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆಟೋ ಸೇರಿ ಖಾಸಗಿ ವಾಹನಗಳು ಸಹ ನಿತ್ಯದಂತೆಯೇ ರಸ್ತೆಗಿಳಿದಿದ್ದವು.
ಗಾಂಧಿಗಂಜ್ ಸೇರಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿರುವ ಎಪಿಎಂಸಿ ಮಾರುಕಟ್ಟೆಗಳು ಬಂದ್ ಮಾಡಿದ್ದನ್ನು ಹೊರತುಪಡಿಸಿ ಉಳಿದೆಲ್ಲವೂ ತೆರೆದಿದ್ದವು. ಹೀಗಾಗಿ ಬಂದ್ ಬಿಸಿ ಜಿಲ್ಲೆ ಜನತೆಗೆ ತಟ್ಟಲಿಲ್ಲ. ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು. ರೈತರ ಹಾಗೂ ಬಡವರ ಬದುಕು ಬರ್ಬಾದ್ ಮಾಡುವ ಕಾಯ್ದೆಗಳನ್ನು ವಾಪಸ್ ಪಡೆಯುವವವರೆಗೆ ಹೋರಾಟ ನಡೆಸುವುದಾಗಿ ಪ್ರಮುಖರು ಗುಡುಗಿದರು.
ನಗರದ ಅಂಬೇಡ್ಕರ್ ವೃತ್ತದ ಹತ್ತಿರ ವಿವಿಧ ಸಂಘಟನೆಗಳ ಪ್ರಮುಖರು ಜಮಾಯಿಸಿ ಬಸವೇಶ್ವರ ವೃತ್ತ, ಭಗತ್ಸಿಂಗ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದರು. ಕೆಲವರು ಜಿಲ್ಲಾಧಿಕಾರಿ ಕಚೇರಿ ಒಳಗೆಡೆ ನುಗ್ಗಲು ಯತ್ನಿಸಿದರು. ಆದರೆ ಪೊಲೀಸರು ಅವಕಾಶ ನೀಡಲಿಲ್ಲ. ಹೀಗಾಗಿ ಮುಖ್ಯ ದ್ವಾರದ ಎದುರು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ರೈತ ಸಂಘ (ಪುಟ್ಟಣ್ಣಯ್ಯ ಬಣ), ರೈತ ಸಂಘ (ಕೋಡಿಹಳ್ಳಿ ಬಣ), ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಕರವೇ, ಸಿಪಿಎಂ, ಸಿಪಿಐ, ಎಐಟಿಯುಸಿ ಸೇರಿ 15ಕ್ಕೂ ಹೆಚ್ಚು ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಪ್ರಮುಖರು, ಜನಪರವಾಗಿದ್ದ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಮುಂದಾಗಿರುವ ಸರ್ಕಾರ ಕ್ರಮ ಖಂಡನೀಯ. ಭೂ ಸುಧಾರಣೆ ಕಾಯ್ದೆಯಲ್ಲಿರುವ ರೈತ, ಕೃಷಿ ಕಾರ್ಮಿಕರ ಮತ್ತು ಭೂ ರಹಿತ ಬಡಜನರ ಪರವಾದ ಆಶಯಗಳನ್ನೇ ಸರ್ಕಾರ ನಾಶಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಆಣದೂರೆ, ಬಾಬು ಪಾಸ್ವಾನ್, ಬಾಬುರಾವ ಹೊನ್ನಾ, ಆರ್.ಪಿ.ರಾಜಾ, ನಜೀರ್ ಅಹ್ಮದ್, ಮಾಣಿಕ, ದಯಾನಂದ ಸ್ವಾಮಿ, ಎಂ.ಡಿ.ಶಫಾಯತ್ ಅಲಿ, ಖಮರ್ ಪಟೇಲ್, ಸೈಯದ್ ಮನ್ಸೂರ್ ಅಹ್ಮದ್ ಖಾದ್ರಿ, ಶಿವರಾಜ ಕಟಗಿ, ಅಲಿ ಅಹ್ಮದ್ ಖಾನ್, ಪ್ರಭು ತಗಣಿಕರ್, ಗುರುಪಾದಯ್ಯ ಸ್ವಾಮಿ, ವಿನೋದ ಅಪ್ಪೆ, ಅಬ್ದುಲ್ ಖಾದರ್, ಬಾಬುರಾವ ವಾಡೇಕರ್, ಪ್ರಭು ಹೊಚಕನಳ್ಳಿ, ಮುಬಸ್ಸಿರ್ ಸಿಂಧೆ, ಪಪ್ಪುರಾಜ್ ಮೇತ್ರೆ, ಸುನೀಲ ವರ್ಮಾ, ಮಚೇಂದ್ರ ಮಿರ್ಜಾಪುರ, ಅಹ್ಮದ್ ಜಂಬಗಾ ಇತರರಿದ್ದರು. ಬೇಡಿಕೆ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಪ್ರತಿಭಟನಾಕಾರರಿಗಿಂತ ಪೊಲೀಸರೇ ಅಧಿಕ !
ಬೀದರ್ ನಗರ ಸೇರಿ ಜಿಲ್ಲೆಯಲ್ಲಿ ಎಲ್ಲೂ ಬಂದ್ ನಡೆಯುವುದಿಲ್ಲ ಎಂಬುದು ಮೊದಲೇ ಗೊತ್ತಿದ್ದರೂ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ರ್ಯಾಲಿ ನಡೆಸಲಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು. ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾಕಾರರಿಗಿಂತ ಪೊಲೀಸರೇ ಹೆಚ್ಚು ಕಂಡುಬಂದರು. 15ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದವು. ಆದರೆ ನಿರೀಕ್ಷಿತ ಸಂಖ್ಯೆಯಲ್ಲಿ ಹೋರಾಟಗಾರರು ಹೊರಗೆ ಬರಲಿಲ್ಲ.
ಬಂಡವಾಳಶಾಹಿಗಳ ಬೆನ್ನಿಗೆ ಬಿಜೆಪಿ
ತಾವು ರೈತಪರ ಎನ್ನುತ್ತಲೇ ಬಿಜೆಪಿ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕಿ ಬಂಡವಾಳಶಾಹಿಗಳ ಬೆನ್ನಿಗೆ ನಿಲ್ಲುವ ಕೆಲಸ ಮಾಡುತ್ತಿದೆ ಎಂದು ಪ್ರಮುಖರು ದೂರಿದರು. ಬಡವರ, ರೈತರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ರೈತರ ಪರವಿದ್ದಂಥ ಕಾಯ್ದೆಗಳಿಗೆಲ್ಲ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಉಳ್ಳವರ ನೆರವಿಗೆ ನಿಲ್ಲುತ್ತಿದೆ. ಬಿಜೆಪಿ ನಿಲುವು ಪಕ್ಕ್ಕಾ ಕಾರ್ಪೋರೇಟ್ ಪರವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದರು. ದೇವರಾಜ ಅರಸು ಸಿಎಂ ಇದ್ದಾಗ ಭೂ ಸುಧಾರಣೆ ಕಾಯ್ದೆಗೆ ಮಹತ್ವದ ತಿದ್ದುಪಡಿಗಳನ್ನು ತಂದು ಉಳುವವನೇ ಭೂ ಒಡೆಯ ಎಂದು ಘೋಷಿಸಿದ್ದರು. ಈ ಕಾಯ್ದೆ ಒಬ್ಬ ವ್ಯಕ್ತಿ ಒಣ ಭೂಮಿಯಾದರೆ 54 ಎಕರೆ, ತರಿ ಜಮೀನಾದರೆ 12ರಿಂದ 18, ತೋಟವಾದರೆ 10 ಎಕರೆಗಿಂತ ಹೆಚ್ಚು ಭೂಮಿ ಹೊಂದುವಂತಿಲ್ಲ. ವ್ಯವಸಾಯ ಭೂಮಿ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬಿತ್ಯಾದಿ ಅವಕಾಶ ಕಲ್ಪಿಸಿತ್ತು. ಆದರೆ ಈ ಕಾಯ್ದೆಗೆ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿ ಕೃಷಿಕರಲ್ಲದವರ ಕೈಗೆ ಕೃಷಿಭೂಮಿ ಒಪ್ಪಿಸಲು ಮುಂದಾಗಿದೆ. ಶ್ರೀಮಂತರು, ಬಂಡವಾಳ ಶಾಹಿಗಳಿಗೆ, ಕಾರ್ಪೋರೇಟ್ ಕಂಪನಿಗಳಿಗೆ ಎಷ್ಟು ಬೇಕಾದರೂ ಭೂಮಿ ಕೊಳ್ಳುವಂತಹ ಅವಕಾಶ ನೀಡಲು ಹೊರಟಿದೆ. ರೈತ, ಕಾರ್ಮಿಕ ವಿರೋಧಿ ಮಸೂದೆ, ಸುಗ್ರೀವಾಜ್ಞೆಗಳನ್ನು ಸರ್ಕಾರ ಕೂಡಲೇ ಕೈಬಿಡಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಔರಾದ್ ನಲ್ಲಿ ಪ್ರೊಟೆಸ್ಟ್
ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಔರಾದ್ ನಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರಮುಖರು ರೈತರ ಹೋರಾಟಕ್ಕೆ ಬೆಂಬಲಿಸಿ ತಹಸೀಲ್ದಾರ್ ಚಂದ್ರಶೇಖರರಾವ ಅವರಿಗೆ ಮನವಿಪತ್ರ ಸಲ್ಲಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಕೊಳ್ಳುರ್, ಮುಖಂಡ ಬಸವರಾಜ ದೇಶಮುಖ, ಜೆಡಿಎಸ್ ತಾಲೂಕು ಅಧ್ಯಕ್ಷ ತಾನಾಜಿ ತೋರಣೇಕರ್, ಮಲ್ಲಿಕಾರ್ಜುನ ಶೆಟಕಾರ, ಮಸ್ರತ್ ಪಟೇಲ್ ಇತರರಿದ್ದರು