ರೈತ ವಿರೋಧಿ ಕಾಯ್ದೆಗಳಿಂದ ಕೃಷಿಗೆ ಹಿನ್ನಡೆ

12BANNU1
ಬನ್ನೂರಿನ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ(ಮೂಲಸಂಘಟನೆ)ದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಸುನಂದಾ ಜಯರಾಂ, ಬನ್ನೂರು ನಾರಾಯಣ್, ಸೂರಿ, ಇಂಡುವಾಳು ಚಂದ್ರಶೇಖರ್ ಇದ್ದರು.
Published on

ಬನ್ನೂರು: ರೈತರಿಗೆ ಮಾರಕವಾಗಿರುವ ಯೋಜನೆಗಳು, ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ಅನ್ನದಾತರ ವಿರೋಧಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಮೂಲಸಂಘಟನೆ) ರಾಜ್ಯ ನಾಯಕಿ ಸುನಂದಾ ಜಯರಾಂ ಆರೋಪಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಂಡ್ಯ, ಮೈಸೂರು ಭಾಗದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಕಾಯ್ದೆ, ಕಂದಾಯ ನೀತಿ, ವಿದ್ಯುತ್ ಖಾಸಗೀಕರಣ ಸೇರಿದಂತೆ ಹಲವು ರೈತರ ವಿರೋಧಿ ಯೋಜನೆಗಳನ್ನು ಸರ್ಕಾರ ಅನುಷ್ಠಾನ ಮಾಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ಮೊದಲು ರೈತರ ಕಷ್ಟವನ್ನು ಅರ್ಥೈಸಿಕೊಳ್ಳಬೇಕು. ದಿನೇ ದಿನೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ರೈತರ ಕೃಷಿಯ ಕಾಯಕ ತನಗೆ ಮಾತ್ರ ಸಾಕು, ಮುಂದಿನ ತಲೆಮಾರಿಗೆ ಬೇಡ ಎಂದು ಕೃಷಿಯನ್ನೇ ತ್ಯಜಿಸಿ ಅನ್ಯವೃತ್ತಿಯತ್ತ ಮುಖ ಮಾಡುವ ಸ್ಥಿತಿ ಬಂದೊದಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನ ಆಹಾರಕ್ಕಾಗಿ ಹಾಹಾಕಾರಪಡುವ ಸ್ಥಿತಿ ತಲೆದೋರಲಿದೆ ಎಂದು ಎಚ್ಚರಿಸಿದರು.

ಸರ್ಕಾರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಿದರೆ ರೈತ ಯಾರ ಮುಂದೆಯೂ ಕೈಚಾಚುವ ಅಗತ್ಯ ತಲೆದೋರುವುದಿಲ್ಲ. ರೈತರಿಗೆ ಅಗತ್ಯ ಕಾಲದಲ್ಲಿ ಬಿತ್ತನೆ ಬೀಜ, ನೀರಿನ ಸೌಲಭ್ಯ ಒದಗಿಸಿದರೆ ರೈತನೇ ಅನೇಕರಿಗೆ ಆಶ್ರಯದಾತನಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಸಂಘದ ಜಿಲ್ಲಾಧ್ಯಕ್ಷ ನಾರಾಯಣ್ ಮಾತನಾಡಿ, ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಎಷ್ಟೋ ಮನವಿ ಮಾಡಿದರೂ ನಮ್ಮ ಬೇಡಿಕೆಯನ್ನು ಸರ್ಕಾರ ಮುಂದೂಡುತ್ತಿದೆಯೇ ಹೊರತು ರೈತರ ಬಗ್ಗೆ ಕಾಳಜಿ ತೋರುವ ಕೆಲಸ ಮಾಡುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ರೈತರು, ಮುಖಂಡರು ಮುಂದಿನ ದಿನಗಳಲ್ಲಿ ಸರ್ಕಾರದ ನೀತಿಯನ್ನು ಖಂಡಿಸಿ ಕೈಗೊಳ್ಳಬೇಕಾದ ಹೋರಾಟಗಳ ಬಗ್ಗೆ ಚರ್ಚಿಸಿದರು. ಕೆ.ಬೋರೇಗೌಡ, ನಂಜೇಗೌಡ, ಹೊನ್ನಪ್ಪ, ವೆಂಕಟೇಶ್, ಹೊನ್ನೇಗೌಡ, ಇಂಡುವಾಳು ಚಂದ್ರಶೇಖರ್, ಬನ್ನೂರು ಸೂರಿ, ಚನ್ನೇಗೌಡ, ಲಕ್ಷ್ಮಣ್, ಎಂ.ವಿ.ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net