ರೈತ ವಿರೋಧಿ ಶಾಸನ ಹಿಂಪಡೆಯಲಿ

20 GAJENDRAGAD 1 A
Published on

ಗಜೇಂದ್ರಗಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಭೂಸುಧಾರಣಾ ಕಾಯ್ದೆ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಕಾಯ್ದೆಗಳ ತಿದ್ದುಪಡಿಗಳು ರೈತರಿಗೆ ಮರಣ ಶಾಸನಗಳಾಗಿ ಪರಿಣಮಿಸುತ್ತವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆರೋಪಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ, ಜನವಿರೋಧಿ ನೀತಿಗಳನ್ನು ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ಹಾಗೂ ರೈತರ ಪ್ರತಿಭಟನೆ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಈವರೆಗೆ ರೈತರು ಸ್ವಾವಲಂಬಿಯಾಗಿ ಬದುಕುತ್ತಿದ್ದರು. ಈಗ ಕೇಂದ್ರ ಸರ್ಕಾರ ಅವರನ್ನು ಕಾರ್ಪೆರೇಟ್ ಕಂಪನಿಗಳ ಜೀತದಾಳುಗಳನ್ನಾಗಿ ಮಾಡಲು ಹೊರಟಿದೆ. ಆದರೆ, ಯಾವುದೇ ಚರ್ಚೆ ಇಲ್ಲದೆ ರೈತ, ದಲಿತ, ಕಾರ್ವಿುಕ ವಿರೋಧಿ ಸುಗ್ರೀವಾಜ್ಞೆಗಳ ಸರಮಾಲೆ ಘೊಷಿಸಿತು. ಅದರ ವಿರುದ್ಧ ರೈತರು, ಕಾರ್ವಿುಕರು ದೇಶವ್ಯಾಪಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಲಾದರೂ ಸರ್ಕಾರ ತನ್ನ ಹಠಮಾರಿ ಧೋರಣೆ ಕೈಬಿಟ್ಟು ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರ ರಾಮನ ಹೆಸರಿನಲ್ಲಿ ರಾಜಕಾರಣ, ಹಣ ವಸೂಲಿ ಮಾಡುತ್ತಿರುವುದಕ್ಕೆ ವಿರೋಧವಿದೆ. ಈ ಹಿಂದೆ ರಥ ಯಾತ್ರೆ, ಇಟ್ಟಿಗೆ ಸಂಗ್ರಹದ ಹೆಸರಿನಲ್ಲಿ ಸಂಗ್ರಹಿಸಿದ ಹಣದ ವಿವರ ಎಲ್ಲಿದೆ. ಅದನ್ನು ಜನರ ಮುಂದಿಡಬೇಕು ಎಂದು ಪ್ರಶ್ನಿಸಿದರು.

ಕೃಷಿ ಕಾನೂನುಗಳು ಅವಸರದಲ್ಲಿ ಮಾಡಿದ ಮತ್ತು ಮೇಲ್ನೋಟಕ್ಕೆ ಇವು ರೈತ ವಿರೋಧಿ ಎನಿಸುತ್ತಿವೆ. ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ಅನ್ನದಾತರನ್ನು ಬಂಧಿಸಿಡುವ ಪ್ರಯತ್ನ ಮಾಡುತ್ತಿರುವುದು ಮೋದಿ ಆಧುನಿಕ ಹಿಟ್ಲರ್ ಎಂಬುದನ್ನು ಸಾಬೀತು ಪಡಿಸಿದೆ. ಈ ಹೊಸ ಕೃಷಿ ಕಾಯ್ದೆ ಜಾರಿಗೊಂಡರೆ ಕಪ್ಪು ಹಣದ ಕುಳಗಳು ಕೃಷಿ ಭೂಮಿ ಕೊಂಡುಕೊಳ್ಳುತ್ತಾರೆ. ಅವರೇನು ಅದನ್ನು ಕೃಷಿ ಕಾರ್ಯಕ್ಕೆ ಬಳಕೆ ಮಾಡುವುದಿಲ್ಲ. ಇದರಿಂದಾಗಿ ದೇಶದ ಆಹಾರ ಭದ್ರತೆಗೆ ಕಂಟಕ ಎದರುರಾಗುವ ಅಪಾಯವಿದೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ ಮಾತನಾಡಿ, ರೈತರಿಗೆ ಅನ್ಯಾಯ ಮಾಡಿದರೆ ಯಾವುದೇ ಸರ್ಕಾರವಿದ್ದರೂ ಉಳಿಯುವುದಿಲ್ಲ . ನಮ್ಮ ಹಿಂದಿನ ಸರ್ಕಾರದಲ್ಲಿ ಮಂಜೂರಾದ 1116 ಮನೆಗಳನ್ನು ರದ್ದು ಮಾಡಲು ಸ್ಥಳೀಯ ಶಾಸಕರು ಯತ್ನಿಸುತ್ತಿದ್ದಾರೆ. ಗಜೇಂದ್ರಗಡ ತಾಲೂಕಿನ ಅಧಿಕಾರಿಗಳು ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.

300ಕ್ಕೂ ಅಧಿಕ ಟ್ರ್ಯಾಕ್ಟರ್​ಗಳಿಂದ ರ‍್ಯಾಲಿ

ಎಪಿಎಂಸಿ ಮುಂಭಾಗದಿಂದ ಪ್ರಾರಂಭಗೊಂಡ ರ್ಯಾಲಿಯಲ್ಲಿ 300ಕ್ಕೂ ಅಧಿಕ ಟ್ರ್ಯಾಕ್ಟರ್​ಗಳು ಪಾಲ್ಗೊಂಡಿದ್ದು ಗಮನ ಸೆಳೆಯಿತು. ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ಸಂಚರಿಸಿತು. ಮಾಜಿ ಶಾಸಕ ಡಿ.ಆರ್. ಪಾಟೀಲ, ಶ್ರೀಶೈಲಪ್ಪ ಬಿದರೂರ, ಐ.ಎಸ್. ಪಾಟೀಲ, ಮಿಥುನ ಪಾಟೀಲ, ಡಿಕೆಶಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಚನ್ನಿ, ಶಿವರಾಜ ಘೊರ್ಪಡೆ, ಶಶಿಧರ ಹೂಗಾರ, ಮುರ್ತಜಾ ಡಾಲಾಯತ, ಬಿ.ಎಸ್. ಶೀಲವಂತರ ವಿ.ಬಿ. ಸೋಮನಕಟ್ಟಿಮಠ, ಅರ್ಜುನ ರಾಠೋಡ, ಎಚ್.ಎಸ್. ಸೋಂಪೂರ, ವೀರಣ್ಣ ಶೆಟ್ಟರ್, ವೆಂಕಟೇಶ ಮುದಗಲ್ಲ, ಮಂಜುಳಾ ಹುಲ್ಲಣ್ಣವರ, ಅಪ್ಪು ಮತ್ತಿಕಟ್ಟಿ, ಸಂಜಯ ದೊಡ್ಡಮನಿ, ಅಸ್ಲಾಮ ಕೊಪ್ಪಳ, ಶಶಿಧರ ಹೊಟ್ಟಿನ, ಪ್ರಶಾಂತ ರಾಠೋಡ, ಸಿದ್ದು ಗೊಂಗಡಶೆಟ್ಟಿಮಠ, ಜಗದೀಶ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net