ರೈತ ರಾಜಪುತಗೆ ರಾಜ್ಯೋತ್ಸವ ಪ್ರಶಸ್ತಿ

surajsingh rajput
Published on

ಬೀದರ್: ಪ್ರಗತಿಪರ ರೈತ ಸೂರಜಸಿಂಗ್ ರಾಜಪುತ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ರಾಜ್ಯ ಸರ್ಕಾರ ಬುಧವಾರ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಬೀದರ್ ಜಿಲ್ಲೆಯಿಂದ ಕೃಷಿ ಕ್ಷೇತ್ರದಲ್ಲಿ ರಾಜಪುತ ಅವರನ್ನು ಆಯ್ಕೆ ಮಾಡಲಾಗಿದೆ.

ಸೂರಜಸಿಂಗ್ ಅವರು ಮೂಲತಃ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದವರು. ಕೃಷಿ ಕುಟುಂಬದಿಂದ ಬಂದ ಇವರು ಆರೆಸ್ಸೆಸ್, ಬಿಜೆಪಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಲೇ ಕೃಷಿಯಲ್ಲೂ ಸಾಧನೆ ಮಾಡಿರುವುದು ವಿಶೇಷ. ಇವರದ್ದು ಗೋವು ಆಧರಿತ ಕೃಷಿಯಾಗಿದ್ದು, ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಮದಕಟ್ಟಿ ಗ್ರಾಮದಲ್ಲಿರುವ ಒಂದೂವರೆ ಎಕರೆ ಹಾಗೂ ಅಂಬೇಸಾಂಗ್ವಿ ಗ್ರಾಮದ ಹತ್ತಿರದ 6 ಎಕರೆ ಜಮೀನಿನಲ್ಲಿ ಕೃಷಿ ಕಾರ್ಯವನ್ನು ಕೈಗೊಂಡಿದ್ದಾರೆ. ಬಹು ಬೆಳೆ ಪದ್ಧತಿಯಲ್ಲಿ ತೊಡಗಿದ್ದಾರೆ. ವಿವಿಧ ಬೆಳೆ, ತರಕಾರಿ ಜತೆಗೆ ಮರಗಳನ್ನು ಹಚ್ಚಿ ಗಮನ ಸೆಳೆದಿದ್ದಾರೆ.

ತಮ್ಮ ಜಮೀನಿನಲ್ಲಿ ಇವರು ವಿವಿಧ ತಳಿಗಳ ಸುಮಾರು 6 ಸಾವಿರ ಮರಗಳನ್ನು ಹಚ್ಚಿದ್ದಾರೆ. ಮಾವು, ತೆಂಗು, ನಿಂಬೆ, ಸಾಗವಾನಿ, ಶ್ರೀಗಂಧ ಸೇರಿದಂತೆ ವಿವಿಧ ಮರಗಳಿವೆ. 6 ಎಕೆರೆ ಜಮೀನಿಗೆ ಬಿದಿರು ಬಂಬು ಮರಗಳ ಫೆನ್ಸಿಂಗ್ ಮಾಡಿದ್ದಾರೆ. ಎಂಟು ದೇಶಿ ಗೋವುಗಳನ್ನು ಸಹ ಹೊಂದಿದ್ದು, ಇವುಗಳ ಸಗಣಿ, ಮೂತ್ರವನ್ನು ಬೆಳೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿವಿಧ ಪ್ರಯೋಗಗಳ ಮೂಲಕ ಹೆಚ್ಚಿನ ಇಳುವರಿ ತೆಗೆದ ಖ್ಯಾತಿ ಇವರಿಗಿದೆ. ಒಂದು ಎಕರೆಯಲ್ಲಿ 15 ಕ್ವಿಂಟಾಲ್ ತೊಗರಿ, 15 ಕ್ವಿಂಟಾಲ್ ಜೋಳದ ಇಳುವರಿ ತೆಗೆದಿದ್ದಾರೆ. ನಿತ್ಯವೂ ಹೊಲಕ್ಕೆ ತೆರಳಿ ಸ್ವತಃ ಕೃಷಿಯಲ್ಲಿ ತೊಡಗಿ ಖುಷಿ ಕಾಣುತ್ತಾರೆ ಸೂರಜಸಿಂಗ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net