ರೈತ ಮೋರ್ಚಾ ಘಟಕದಿಂದ ಪ್ರತಿಭಟನೆ

08arsph1ep
Published on

ಅರಸೀಕೆರೆ : ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 100 ದಿನಗಳ ಸಾಧನೆ ಎಂದು ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ದುಮ್ಮೇನಹಳ್ಳಿ ರಮೇಶ್ ಆರೋಪಿಸಿದರು.
ನಗರದ ತಾಲೂಕು ಕಚೇರಿ ಎದುರು ಪಕ್ಷದ ರೈತಮೋರ್ಚಾ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅನ್ನಭಾಗ್ಯ, ವಿದ್ಯಾನಿಧಿ, ಶಕ್ತಿ ಸೇರಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಜನರನ್ನು ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವ ಮೂಲಕ ದಲ್ಲಾಳಿಗಳ ಪರವಾಗಿ ವರ್ತಿಸುತ್ತಿರುವುದು ಅಕ್ಷಮ್ಯ ಎಂದರು.
200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಏನಾಗಿದೆ ಎಂಬುದು ಜನರಿಗೆ ಗೊತ್ತಿದೆ. ಅಘೋಷಿತ ಲೋಡ್‌ಶೆಡ್ಡಿಂಗ್ ಮೂಲಕ ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳ್ಳಿರುವುದು 100 ದಿನ ಅಧಿಕಾರ ನಡೆಸಿದ್ದಕ್ಕೆ ಸಾಕ್ಷಿಯಾಗಿದೆ. ಶಕ್ತಿ ಯೋಜನೆ ಹೆಸರಿನಲ್ಲಿ ಕೆಎಸ್‌ಆರ್‌ಟಿಸಿಯನ್ನು ನಿಸ್ತೇಜ ಮಾಡಲಾಗಿದೆ ಎಂದವರು ದೂರಿದರು.
ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ತನ್ನದೇ ಕೊಡುಗೆ ಎಂದು ಸಿಎಂ ಸಿದ್ದರಾಮಯ್ಯ ಬಿಂಬಿಸಿಕೊಳ್ಳುವ ಮೂಲಕ ಜನರನ್ನು ವ್ಯವಸ್ಥಿತವಾಗಿ ದಾರಿತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಮೋರ್ಚಾ ತಾಲೂಕು ಅಧ್ಯಕ್ಷ ಯತೀಶ್, ನಗರಾಧ್ಯಕ್ಷ ಪುರುಷೋತ್ತಮ್, ಮುಖಂಡರಾದ ಡಿ.ಬಿ.ಗಂಗಾಧರ, ಜಿವಿಟಿ ಬಸವರಾಜ್, ವಿಜಯ್ ಕುಮಾರ್, ಕೊಟ್ರೇಶ್, ತೇಜಸ್, ಅಶೋಕ್, ದಯಾನಂದ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net