

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಪ್ರಯೋಜವಾಗುತ್ತಿಲ್ಲವೆಂದು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ಗೆ ೇರಾವ್ ಹಾಕಲು ಗುಂಪುಗೂಡಿದ್ದ ರೈತ ಸಂಘದ ಮುಖಂಡರನ್ನು ಪೊಲೀಸರು ಬಂಧಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ರೈತರನ್ನು ಪೊಲೀಸರು ಬಂಧಿಸಿದರು. ಬಳಿಕ ಅಲ್ಲಿಂದ ವಾಹನದಲ್ಲಿ ಕಾಗಲವಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಈ ಕುರಿತು ರೈತ ಮುಖಂಡ ಹೊನ್ನೂರು ಬಸವಣ್ಣ ವಿಜಯವಾಣಿಯೊಂದಿಗೆ ಮಾತನಾಡಿ, ಜಿಲ್ಲೆಯ ಗೋಮಾಳಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ನಿಲ್ಲಿಸಬೇಕು. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕಾಗಿ ಗ್ರಾಮದ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಪರಿಹಾರ ಹಣ ಕೊಟ್ಟಿಲ್ಲ. ಕೂಡಲೇ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡಬೇಕು. ಚಾಮುಲ್ ಹಾಲು ಒಕ್ಕೂಟಕ್ಕೆ ಬಿಡುಗಡೆಯಾಗಬೇಕಿರುವ ಬಾಕಿ 56 ಕೋಟಿ ರೂ. ಗಳನ್ನು ಮಂಜೂರು ಮಾಡಬೇಕು. ನವೆಂಬರ್‌ನಲ್ಲಿ ಕಡಿತ ಮಾಡಿದ್ದ ಹಾಲಿನ ದರವನ್ನು ವಾಪಸ್ ನೀಡಬೇಕು. ಕೊಳವೆ ಬಾವಿಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ಆರ್‌ಆರ್ ನಂಬರ್ ಕೊಡಬೇಕು ಎಂದು ಒತ್ತಾಯಿಸಿದರು.
ಗುಂಡ್ಲುಪೇಟೆ ತಾಲೂಕಿನಲ್ಲಿ ರೈತ ಹೋರಾಟಗಾರರ ಮೇಲೆ ದಾಖಲಿಸಿರುವ ಕೇಸ್ ವಾಪಸ್ ಪಡೆದುಕೊಳ್ಳಬೇಕು. ಜಿಲ್ಲೆಯ ವ್ಯಾಪ್ತಿಯ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು. ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಕೆಂಪುಸಾಗರ ಕೆರೆಯಿಂದ ಗುಂಡ್ಲುನದಿವರೆಗೆ ನೀರು ತುಂಬಿಸಬೇಕು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜವಾಗದ ಹಿನ್ನೆಲೆಯಲ್ಲಿ ೇರಾವ್ ಹಾಕಲು ಮುಂದಾದೆವು ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಸಚಿವರೊಂದಿಗೆ ಮಾತನಾಡಿಸುವುದಾಗಿ ಹೇಳಿದ ಪೊಲೀಸರು ನಮ್ಮನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಕೂರಿಸಿದರು. ನಗರದಲ್ಲಿ ಸಚಿವರು ಸಭೆ ನಡೆಸಿ ಹೋದರೂ ಕೂಡ ನಮ್ಮನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಕಿಡಿಕಾರಿದರು. ಆ ಬಳಿಕ ಪೊಲೀಸರು ರೈತ ಹೋರಾಟಗಾರರನ್ನು ಬಿಡುಗಡೆ ಮಾಡಿದರು.
ಮೇಲಾಜಿಪುರ ಕುಮಾರ್, ವಿಜಯ್‌ಕುಮಾರ್ ಹೆಗ್ಗೋಠಾರ, ನಾಗಪ್ಪ ವೀರನಪುರ, ಪುಟ್ಟೇಗೌಡ, ಜಗದೀಶ, ಪಡಗೂರು ಮಹದೇವಸ್ವಾಮಿ, ಸುಂದ್ರಣ್ಣ ಇತರರು ಇದ್ದರು.