ರೈತ ತರಬೇತಿ ಕೇಂದ್ರ ಲೋಕಾರ್ಪಣೆ

Rait tarabeti kendra
Published on

ಬೀದರ್: 100 ರೈತರಿಗೆ ತರಬೇತಿ ನೀಡುವ ಸಾಮಥ್ರ್ಯ ವುಳ್ಳ 1.38 ಕೋಟಿ ರೂ. ವೆಚ್ಚದದಲ್ಲಿ ನಿರ್ಮಾಣವಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ರೈತ ತರಬೇತಿ ಕೇಂದ್ರದ ನೂತನ ಕಟ್ಟಡ ಭಾನುವಾರ ಲೋಕಾರ್ಪಣೆಗೊಂಡಿದೆ.

ಜನವಾಡ ರಸ್ತೆಯಲ್ಲಿನ ಪಶು ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಿ ಮಾತನಾಡಿ, ರೈತರ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ರೈತ ಹೋರಾಟ ಹಿನ್ನೆಲೆಯಿಂದ ಬಂದಿರುವ ಸಿಎಂ ಯಡಿಯೂರಪ್ಪ ಅವರು ರೈತರಿಗಾಗಿ ಸಾಕಷ್ಟು ವಿನೂತನ ಯೋಜನೆಗಳನ್ನು ರೂಪಿಸಿದ್ದಾರೆ. ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಹೈನುಗಾರಿಕೆ, ಕೃಷಿ ಕ್ಷೇತ್ರದಲ್ಲಿ ರೈತರು ಹೊಸ ಪ್ರಯೋಗಕ್ಕೆ ಮುಂದಾಗಬೇಕು. ಇದಕ್ಕಾಗಿ ಸೂಕ್ತ ತರಬೇತಿ ಕೇಂದ್ರ ನಿರ್ಮಿಸಲಾಗಿದೆ. ಜಿಲ್ಲೆಯ ರೈತರು ನಾನಾ ತರಬೇತಿಗಳ ಲಾಭ ಪಡೆದು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ಕೋರಿದರು.

ಶಾಸಕ ರಹೀಮ್ ಖಾನ್ ಮಾತನಾಡಿ, ಕೃಷಿಯಲ್ಲಿ ರೈತರು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮತ್ತು ಮಾಹಿತಿಯನ್ನು ಪಡೆದುಕೊಳ್ಳಲು ಈ ತರಬೇತಿ ಕೇಂದ್ರ ಪೂರಕವಾಗಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಹಂಚಿನಾಳ, ರೈತ ತರಬೇತಿ ಕೇಂದ್ರದ ಅಧಿಕಾರಿ ಉದಯಕುಮಾರ, ಪಶು ವೈದ್ಯಾಧಿಕಾರಿ ಡಾ. ಗೌತಮ ಅರಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net