

ಗೋಣಿಕೊಪ್ಪ: ಕೃಷಿಗೆ ಪೂರಕವಾಗಿರುವ ರೈತ, ಜಾನುವಾರುಗಳಿಗೆ ವಿಶೇಷ ಗೌರವ ನೀಡುವ ಹಬ್ಬವಾಗಿ ಮಕರ ಸಂಕ್ರಾಂತಿ ಆಚರಿಸುತ್ತೇವೆ ಎಂದು ವಿವಿಧ ಸಮುದಾಯ ಪ್ರಮುಖರು ತಿಳಿಸಿದರು.
ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮದಡಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಕೂನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಕರ ಸಂಕ್ರಾಂತಿ ಆಚರಣೆ ಕುರಿತು ಮಾಹಿತಿ ನೀಡಿದರು.
ದಕ್ಷಿಣ ಭಾರತದಲ್ಲಿ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸಲ್ಪಡುತ್ತದೆ. ಅನ್ನ ನೀಡುವ ರೈತನಿಗೆ ಹಬ್ಬದಲ್ಲಿ ವಿಶೇಷ ಗೌರವ ನೀಡಲಾಗುತ್ತದೆ. ಜತೆಗೆ ಕೃಷಿಯಲ್ಲಿ ಮುಖ್ಯ ಪಾತ್ರವಹಿಸುವ ಜಾನುವಾರುಗಳನ್ನು ಪೂಜಿಸಲಾಗುತ್ತದೆ. ಸಂಭ್ರಮಕ್ಕಾಗಿ ಬೆಲ್ಲ, ದೇಹದಲ್ಲಿ ಉಷ್ಣಾಂಶ ಹೆಚ್ಚಿಸಲು ಎಳ್ಳು ಸೇವಿಸಲಾಗುತ್ತದೆ. ಅಲ್ಲದೆ ದಾನ, ಧರ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದು ವಿವಿಧ ಸಮುದಾಯ ಗಣ್ಯರು ಮಾಹಿತಿ ಹಂಚಿಕೊಂಡರು.
ತೆಲುಗು ಭಾಷಿಗ ಜಿ.ಲಕ್ಷ್ಮಿರೆಡ್ಡಿ ಮಾತನಾಡಿ, ನಮ್ಮ ಸಮುದಾಯ ಭೋಗಿ, ಕನುಮ ಹೆಸರಿನಲ್ಲಿ ಸಂಕ್ರಾಂತಿ ಆಚರಿಸುತ್ತದೆ. ಶ್ರೀರಾಮನ ಪೂಜೆ ವಿಶಿಷ್ಟ ಆಚರಣೆಯಾಗಿದ್ದು, ಊರಿನಲ್ಲಿ ರಾಮ ಮಂದಿರ ಅಥವಾ ದೇವರ ಚಿತ್ರ ಇಟ್ಟು ಪೂಜಿಸಲಾಗುತ್ತದೆ. ಬೀದಿ ಬೀದಿಗಳಲ್ಲಿ ರಾಮನ ಮೆರವಣಿಗೆ ನಡೆಯಲಿದೆ. ಚಳಿ ಹೆಚ್ಚಿರುವ ಕಾರಣ, ಮೊದಲ ದಿನ ಬೆಂಕಿಯ ಸ್ಪರ್ಶ ಪಡೆದುಕೊಳ್ಳುವ ಆಚರಣೆ ಇದೆ. ಊರಿನ ಮೈದಾನದಲ್ಲಿ ಯುವ ಸಮೂಹ ಬಿದಿರು ಕೋಲಿನ ಕೌಶಲತೆ, ಭಾರದ ಕಲ್ಲು ಎಳೆಯುವ ದೈಹಿಕ ಕಸರತ್ತು ಸ್ಪರ್ಧೆ ಯೊಂದಿಗೆ ಸಂಭ್ರಮಿಸುತ್ತಾರೆ. ಕೋಳಿ ಪಂದ್ಯಾಟ ವಿಶೇಷ ಮನರಂಜನೆ ಕ್ರೀಡೆಯಾಗಿದ್ದು, ಕೋಳಿಗಳ ಕಾಳಗ ಕಣ್ತುಂಬಿಕೊಳ್ಳುವುದು, ಶಕ್ತಿಯುತವಾಗಿ ಕೋಳಿಗಳನ್ನು ಸಾಕುವುದೂ ಆಚರಣೆಯ ಭಾಗ ಎಂದರು.
ಕುಂಬಾರ ಶೆಟ್ರು ಜನಾಂಗದ ಆರ್.ಲತಾ ಮಾತನಾಡಿ, ಸೂರ್ಯದೇವ ದಕ್ಷಿಣಕ್ಕೆ ಪಥ ಬದಲಿಸುವ ಕಾಲಘಟ್ಟವಾಗಿದ್ದು, ಈ ಕಾಲದಲ್ಲಿ ಹೆಚ್ಚು ಶುಭ ಕಾರ್ಯಗಳು ನಡೆಯುತ್ತವೆ. ಸಂಕಮ್ಮ ಎಂಬ ಹೆಣ್ಣು ದೇವರಿಗೆ ಆರಾಧನೆ ಮಾಡಲಾಗುತ್ತದೆ. ರಂಗೋಲಿಯಲ್ಲಿ ಕೆಂಪು ಬಣ್ಣದ ಪಟ್ಟಿಯಲ್ಲಿ ದೇವರನ್ನು ಕಾಣುತ್ತೇವೆ. ಮನೆ ಬಾಗಿಲು, ಗೋಡೆಯಲ್ಲಿ ಕೆಂಪು ಬಣ್ಣದ ಪಟ್ಟೆ ಹಚ್ಚಿ ದೇವರನ್ನು ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದರು.
ತಮಿಳು ಭಾಷಿಗ ವಿ.ಸುಬ್ರಮಣಿ ಮಾತನಾಡಿ, ನೋವು ಮರೆತು ಮತ್ತೆ ಹೊಸತನ ಬರಮಾಡಿಕೊಳ್ಳುವ ಹಬ್ಬವಾಗಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಸೂರ್ಯೋದಯಕ್ಕೆ ಮೊದಲು ಮಡಕೆಯಲ್ಲಿ ಭತ್ತವನ್ನು ಪೂರ್ವ ದಿಕ್ಕಿಗೆ ಇಟ್ಟು ಪೂಜಿಸುವುದು ವಿಶೇಷ ಆಚರಣೆ. ಮಾಟ್ ಪೊಂಗಲ್‌ನಲ್ಲಿ ಗೋಪೂಜೆ, ಸಗಣಿಯನ್ನು ಗೋಡೆಗೆ ಅಂಟಿಸಿ ಹಸುವಿಗೆ ಅನ್ನ ನೀಡಲಾಗುತ್ತದೆ. ಜಾನುವಾರು ಜತೆ ಆಟದ ಸಂಭ್ರಮವಿದ್ದು, ಕೃಷಿಯ ಮೂಲವಾಗಿರುವ ಜಾನುವಾರುವಿಗೆ ವಿಶೇಷ ಗೌರವ ನೀಡುವ ಹಬ್ಬಕ್ಕೆ ಮಹತ್ವ ಇದೆ. ಮದುವೆ ಆಗದವರು ಸಂಗಾತಿಯನ್ನು ಹುಡುಕಿಕೊಳ್ಳಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ತೆಲುಗು ಭಾಷಿಗರಾದ ಎಂ.ಮಂಜುಳಾ ಮಾತನಾಡಿ, ಭೋಗಿ ಪಂಡಿಗೆ, ಸೂರ್ಯ ಪೊಂಗಲ್ ಮಾಟ್, ಮಾಟ್ ಪೊಂಗಲ್, ಪಟ್ಟಿ ಪೊಂಗಲ್ ಆಚರಣೆ ಇದೆ. ಭೋಗಿ ಪಂಡಿಕೆಯಲ್ಲಿ ಮನೆ, ಆವರಣ ಸ್ವಚ್ಛತೆ, ಶಂಕರನಿಗೆ ಎಡೆ ಹಾಕುವ ಶಾಸ್ತ್ರ, ದೇವರಿಗೆ ಕುಂಬಳಕಾಯಿ ಅರ್ಪಣೆ ಮಾಡಲಾಗುತ್ತದೆ. ಸಗಣಿ ಸಾರಿಸಿ, ರಂಗೋಲಿ ಹಾಕಲಾಗುತ್ತದೆ. ಇದು ಮಹಿಳೆಯರ ಸಂಭ್ರಮ ಮೂಲವಾಗಿದ್ದು, ಮಾಟ್ ಪೊಂಗಲ್‌ನಲ್ಲಿ ರೈತ ಬೆಳೆದ ಧಾನ್ಯ ಪೂಜೆ, ಗೋವಿಗೆ ವಿಶೇಷ ಆಹಾರ ನೀಡುವುದು, ಸಣ್ಣ ಮಕ್ಕಳು, ಆಡು, ಮೇಕೆ ಮರಿಗಳಿಗೆ ವಿಶೇಷ ಆಹಾರ ನೀಡುವುದು, ಹುತ್ತಕ್ಕೆ ಪೂಜೆ ಸಲ್ಲಿಸುವ ಆಚರಣೆ ಇದೆ ಎಂದರು.
ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಖಜಾಂಚಿ ವಿ. ವಿ. ಅರುಣ್‌ಕುಮಾರ್, ನಿರ್ದೇಶಕರಾದ ಕೆ. ಬಿ. ಜಗದೀಶ್ ಜೋಡುಬೀಟಿ, ದರ್ಶನ್ ದೇವಯ್ಯ, ಎಂ. ಎಂ. ಚನ್ನನಾಯಕ, ಸಿಂಗಿ ಸತೀಶ್ ಇದ್ದರು.