

ಪಾಂಡವಪುರ: ವೈಯಕ್ತಿಕ ಬದುಕು ಕಟ್ಟಿಕೊಳ್ಳಲು ವಿದೇಶದಿಂದ ಇಲ್ಲಿಗೆ ಬಂದಿಲ್ಲ. ಜನ ಸೇವೆ ಹಾಗೂ ಹಳ್ಳಿಗಳನ್ನು ಕಟ್ಟುವ ಮಹದಾಸೆಯೊಂದಿಗೆ ತಂದೆಯ ಹೋರಾಟದ ಹಾದಿಯಲ್ಲಿ ನಡೆದು ರೈತ ಚಳವಳಿಗೆ ಬಲ ತುಂಬಲು ಬಂದಿದ್ದೇನೆ ಎಂದು ಕಾಂಗ್ರೆಸ್-ರೈತಸಂಘ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್-ರೈತಸಂಘ ಜಂಟಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬೂತ್ ಮಟ್ಟದಿಂದಲೂ ಎಲ್ಲರು ಒಗ್ಗೂಡಿ ಕೆಲಸ ಮಾಡಿದರೆ ಗೆಲುವಿನ ಹಾದಿ ಸುಗಮವಾಗಲಿದೆ. 2018ರ ಚುನಾವಣೆಯಲ್ಲಿ ತಂದೆಯ ಸಾವಿನ ಅನುಕಂಪದ ನಡುವೆಯೂ ಸೋಲಿಸಿದ್ದೇವೆ ಎಂಬ ಕೊರಗು ಜನರಲ್ಲಿ ಕಾಣುತ್ತಿದೆ. ಹೀಗಾಗಿ ಕಳೆದ ಬಾರಿ ಚುನಾವಣೆಗಿಂತ ಈ ಚುನಾವಣೆಯಲ್ಲಿ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ನಮ್ಮ ನಮ್ಮಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿಸುವುದು ಬೇಡ. ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಮನವಿ ಮಾಡಿಕೊಂಡರು.
ಕೆ.ಎಸ್.ಪುಟ್ಟಣ್ಣಯ್ಯ ಅವರು ಎಲ್ಲರನ್ನೂ ಸರಿ ಸಮನವಾಗಿ ಕಾಣುತ್ತಿದ್ದರು. ಹೀಗಾಗಿಯೇ ಜನ ಅವರನ್ನು ಬೆಂಬಲಿಸುತ್ತಿದ್ದರು. ಅವರಂತೆ ನಾನು ಕೂಡ ಎಲ್ಲರನ್ನೂ ಸಮಾನವಾಗಿ ಕರೆದೊಯ್ಯುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಏ.20ರಂದು ನಾಮಪತ್ರ ಸಲಿಕೆ : ಕಾಂಗ್ರೆಸ್-ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಏ.20ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಕ್ಷೇತ್ರದ ಮತದಾರರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವದಿಸಬೇಕು. ಜತೆಗೆ ಏ.14 ಮತ್ತು 15 ರಂದು ದುದ್ದ ಹೋಬಳಿಯ ಹೊಳಲು ಗ್ರಾಮದಿಂದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದವರೆಗೆ ಆಯೋಜಿಸಿರುವ ಪಾದಯಾತ್ರೆಗೆ ಹೆಚ್ಚಿನ ಜನರು ಆಗಮಿಸಬೇಕು ಎಂದು ವಿನಂತಿಸಿದರು.
ಕಾಂಗ್ರಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಿಗಿಂತ ಮೇಲುಕೋಟೆ ವಿಭಿನ್ನ ಕ್ಷೇತ್ರವಾಗಿದ್ದು, ತಮ್ಮ ಜೀವನದುದ್ದಕ್ಕೂ ರೈತ ಪರ ಹೋರಾಟ ಮಾಡಿದ ಕೆ.ಎಸ್.ಪುಟ್ಟಣ್ಣಯ್ಯರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಎರಡನೇ ಬಾರಿಗೆ ಬೆಂಬಲ ವ್ಯಕ್ತಪಡಿಸಿರುವುದು ಹೊಸ ಇತಿಹಾಸ. ಇಡೀ ರಾಜ್ಯದ ರೈತರು ಒಬ್ಬ ರೈತ ಹೋರಾಟಗಾರನ ಮಗನ ಗೆಲುವಿಗಾಗಿ ಜಪ ಮಾಡತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಮತದಾರರು ದರ್ಶನ್ ಅವರನ್ನು ಬಹುಮತದಿಂದ ಚುನಾಯಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಜನವಿರೋಧಿ ನೀತಿ ಅನುಸರಿಸುವ ಮೂಲಕ ಸ್ವಹಿತಾಸಕ್ತಿ ಕಾಪಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ದಬ್ಬಾಳಿಕೆ, ದೌರ್ಜನ್ಯ ಮಿತಿ ಮೀರಿದೆ. ಸರ್ಕಾರಿ ಕಚೇರಿಗಳಲ್ಲಿ ಕಾನೂನು ಪಾಲನೆಯಾಗುತ್ತಿಲ್ಲ. ಶಾಸಕರ ಕುಟುಂಬ ವರ್ಗ ಹೇಳಿದ್ದೆ ವೇದ ವಾಕ್ಯ ಎಂಬತಾಗಿದೆ. ರೈತ ಸಂಘ ಕಬ್ಬಿನ ಬೆಲೆ ನಿಗದಿಗಾಗಿ 109 ದಿನಗಳ ಕಲ ಹೋರಾಟ ನಡೆಸಿದರೂ ಜಿಲ್ಲೆಯ ಯಾವೊಬ್ಬ ಶಾಸಕನು ಹೋರಾಟಕ್ಕೆ ಬೆಂಬಲ ಸೂಚಿಸಲಿಲ್ಲ. ಜೆಡಿಎಸ್ ಶಾಸಕರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಮಾಜಿ ಶಾಸಕ ಎಚ್.ಬಿ.ರಾಮು, ಕೆಪಿಸಿಸಿ ಸದಸ್ಯ ಸಿ.ಕೆ.ನಾಗರಾಜು, ಕಾಂಗ್ರೆಸ್ ಮುಖಂಡರಾದ ನಂಜುಂಡಪ್ಪ, ಎಚ್.ಮಂಜುನಾಥ್, ತಿಮ್ಮೇಗೌಡ, ಹೊಸಹಳ್ಳಿ ಚಂದ್ರು, ಕೊತ್ತತ್ತಿ ರಾಜು, ಸಂಪಳ್ಳಿ ಉಮೇಶ್, ಪಟೇಲ್ ರಾಮು, ಶಿವಳ್ಳಿ ಬೋರೇಗೌಡ, ರಾಜು, ಮಲ್ಲನಾಯಕನಕಟ್ಟೆ ಸುನೀಲ್, ಜಿ.ಮಲ್ಲಿಗೆರೆ ಅಣ್ಣಯ್ಯ, ಅರಸಯ್ಯ, ಶಿವುಗೌಡ, ಹುಳ್ಳೇನಹಳ್ಳಿ ರಾಣಿ ಇತರರು ಇದ್ದರು.