ರೈತ ಕೃಷಿ ಕಾರ್ಮಿಕ ಸಮ್ಮೇಳನಕ್ಕೆ 800 ಪ್ರತಿನಿಧಿಗಳು

2 BLY 2
Published on

ಬಳ್ಳಾರಿ: ಪಶ್ಚಿಮ ಬಂಗಾಳದ ಜಯನಗರದಲ್ಲಿ ಮಾ.11ರಿಂದ 14ರ ವರೆಗೆ ಅಖಿಲ ಭಾರತ ಮಟ್ಟದ 3ನೇ ರೈತ ಕೃಷಿ ಕಾರ್ಮಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಎಐಕೆಕೆಎಂಎಸ್‌ನ ಜಿಲ್ಲಾಧ್ಯಕ್ಷ ಗೋವಿಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು. ರಾಜ್ಯದ 150 ಸೇರಿ 25 ರಾಜ್ಯಗಳಿಂದ 800 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಈ ಪೈಕಿ ಬಳ್ಳಾರಿ ಜಿಲ್ಲೆಯಿಂದ 20 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇವರನ್ನು ಉದ್ದೇಶಿಸಿ ಕಾಮ್ರೇಡ್ ಸತ್ಯವಾನ್, ಪ್ರವಾಷ್ ಘೋಷ್ ಮತ್ತಿತರ ಪ್ರಮುಖರು ಮಾತನಾಡಲಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಬಿತ್ತನೆಬೀಜ, ರಸಗೊಬ್ಬರದ ಮೇಲೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲಾಗುವುದು ಎಂದರು.

ದೇಶದಲ್ಲಿ ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರು, ಕೃಷಿಕರ ಬಗ್ಗೆ ಕಾಳಜಿ ವಹಿಸುವ ಅನಿವಾರ್ಯವಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣಗೊಳ್ಳುವುದರಲ್ಲಿ ಅಚ್ಚರಿ ಇಲ್ಲ ಎಂದರು.

ಸಂಘಟನೆ ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net