

ಚಿತ್ರದುರ್ಗ: ಕೇಂದ್ರ-ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯಿಂದ ನ. 26ರ ಬೆಳಗ್ಗೆ 10ಕ್ಕೆ ನಗರದಲ್ಲಿ ರೈತ-ಕಾರ್ಮಿಕರ ಎಚ್ಚರಿಕಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಕುಮಾರ್ ಸಮತಳ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಜಾರಿಗೆ ತಂದ ಮೂರು ಕಾಯ್ದೆ ಹಿಂಪಡೆಯುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾತಿಗೆ ತಪ್ಪಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ನಿಲ್ಲಿಸಬೇಕು. ಸ್ವಾಮಿನಾಥನ್ ವರದಿ ಅನ್ವಯ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಸೇರಿ ಹತ್ತಾರು ಬೇಡಿಕೆ ಮುಂದಿಟ್ಟುಕೊಂಡು ರ‌್ಯಾಲಿ ಆಯೋಜಿಸಲಾಗಿದೆ ಎಂದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರಮೋದಿ ಅವರು ಈಗ ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ. ಕೃಷಿಗಾಗಿ ಪಡೆದ ಸಾಲ ತೀರಿಸಲಾಗದೆ, ರೈತರು ಆತ್ಮಹತ್ಯೆ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಬೇಸರಿಸಿದರು.
ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ತೋರಿಸುವ ಬದಲು ಭದ್ರಾ ಮೇಲ್ದಂಡೆ ಯೋಜನೆಗಾಗಿ ಘೋಷಿಸಿರುವ 5,300 ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆಗೆ ಪ್ರಯತ್ನಸಿ, ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸಿ, ಬರಪೀಡಿತ ಪ್ರದೇಶಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಬಳಸಿಕೊಳ್ಳುವ ಪ್ರಯತ್ನವಾಗಬೇಕು. ಹಿನ್ನೀರಿನ ಭಾಗದ ಸಂತ್ರಸ್ಥರಿಗೆ ಸೌಲಭ್ಯ ಕಲ್ಪಿಸಿ, ಯಾವ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ವಿದ್ಯುತ್ ಖಾಸಗೀಕರಣ ಮಾಡಬಾರದು. ಸಂಪರ್ಕಕ್ಕಾಗಿ ರೈತರು ಲಕ್ಷಗಟ್ಟಲೇ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹಿಂದಿನ ನಿಯಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಸತ್ಯಪ್ಪ ಮಲ್ಲಾಪುರ, ಸಿ.ಕೆ.ಗೌಸ್‌ಪೀರ್, ಟಿ.ಶಫೀವುಲ್ಲಾ, ರವಿಕುಮಾರ್ ಇತರರಿದ್ದರು.