

ಮೈಸೂರು: ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ)ನಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ ಎಂದು ದೂರಿದರು.
ಐ ಫೋನ್ ಬಿಡಿಭಾಗಗಳ ತಯಾರಿಕಾ ಸಂಸ್ಥೆಯಾದ ಫ್ಯಾಕ್ಸ್‌ಕಾನ್‌ಗೆ ಬಿಜೆಪಿ ಸರ್ಕಾರ 300 ಎಕರೆ ಭೂಮಿ ಮಂಜೂರು ಮಾಡಿದೆ. ಅಲ್ಲದೆ ಒಂದು ಕಂಪನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತಂದು ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆ ಅವಧಿ ವಿಸ್ತರಿಸಲಾಗಿದೆ ಎಂದು ಆರೋಪಿಸಿದರು.
ಈ ತಿದ್ದುಪಡಿ ಕಾರ್ಮಿಕರು ಹಾಗೂ ಮಹಿಳೆಯರನ್ನು ಮತ್ತಷ್ಟು ಶೋಷಣೆ ಮಾಡುವ ತಿದ್ದುಪಡಿಯಾಗಿದೆ. ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ಕೇವಲ 4 ಸಂಹಿತೆಗಳಾಗಿ ಬದಲಾಯಿಸಿದೆ ಎಂದು ಕಿಡಿಕಾರಿದರು.
ಸತತ ಹೋರಾಟದ ಬಳಿಕ ರೈತ ವಿರೋಧಿ ಭೂ ಸ್ವಾಧೀನ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಆದರೆ ಬಿಜೆಪಿಯ ರಾಜ್ಯ ಸರ್ಕಾರ ಹಿಂಪಡೆಯಲಿಲ್ಲ. ಹೀಗಾಗಿ ರೈತ ವಿರೋಧಿಯಾದ ಈ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿ ಮಾಡುವುದಿಲ್ಲ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಹಿಂಪಡೆದಿಲ್ಲ. ಜತೆಗೆ ಬಿಸಿಯೂಟ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿಲ್ಲ. ಹೀಗಾಗಿ ಕೂಡಲೇ ಕಾರ್ಮಿಕರು, ರೈತರು, ಮಹಿಳೆಯರ ಹಿತ ಗಮನದಲ್ಲಿಟ್ಟುಕೊಂಡು ಈ ಕರಾಳ ತಿದ್ದುಪಡಿಗಳನ್ನು ಹಿಂಪಡೆಯಬೇಕು. ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಎನ್.ಕೆ. ದೇವದಾಸ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಸಿಪಿಐ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ, ಕೆ.ಜಿ. ಸೋಮರಾಜೇ ಅರಸ್, ರಾಮು, ಎಸ್.ಬಸವರಾಜು, ಇಕ್ಬಾಲ್ ಪಾಷ ಇತರರು ಇದ್ದರು.