

ಮೈಸೂರು: ನಗರದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಮತ್ತು ಭೂಮಿಪುತ್ರ ರೈತಮಿತ್ರ ಆರ್ಗ್ಯಾನಿಕ್ಸ್ ಸಹಯೋಗದಲ್ಲಿ ‘ರೈತ ಕಲ್ಯಾಣ’ ಇ-ಕಾಮರ್ಸ್ ವೇದಿಕೆ ಮತ್ತು ಕೃಷಿ ಯಶಸ್ವಿನಿ ಕಾರ್ಡ್ ಅನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.
ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಚಂದನ್‌ಗೌಡ ಮಾತನಾಡಿ, ಸಂಘಟನೆಯಿಂದ ರೈತರ ಅಭಿವೃದ್ಧಿಗಾಗಿ ಹಾಗೂ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿರುವುದಲ್ಲದೆ, ಮಣ್ಣಿನ ಫಲವತ್ತತೆ ಮತ್ತು ರಕ್ಷಣೆಗೂ ಶ್ರಮಿಸಲಾಗುತ್ತಿದೆ. ಆದಾಗ್ಯೂ, ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರಿಗೆ ನೆರವಾಗುವ, ಜಾಗೃತಿ ಮೂಡಿಸುವ ಮತ್ತು ಉದ್ದಿಮೆದಾರರನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ರೈತರಿಗೆ ಮೊಬೈಲ್ ಮೂಲಕವೇ ಸಾವಯವ ಕೃಷಿ ಮತ್ತು ರೈತ ಕಲ್ಯಾಣ ಸಂಘದ ಗುರಿಯನ್ನು ತಲುಪಿಸುವ ನಿಟ್ಟಿನಲ್ಲಿ ‘ರೈತ ಕಲ್ಯಾಣ’ ಆ್ಯಪ್ ಮತ್ತು ವೆಬ್‌ಸೈಟ್ ಬಿಡುಗಡೆ ಮಾಡಲಾಗಿದೆ. ಆಧುನಿಕತೆ ಬೆಳೆದಂತೆ ರೈತರಿಗೆ ಡಿಜಿಟಲ್ ಮತ್ತು ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಉತ್ತಮ ಜೀವನವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಇ-ಕಾಮರ್ಸ್ ವೇದಿಕೆಯನ್ನು ಸ್ಥಾಪಿಸಲಾಗಿದೆ. ಸಿರಿವಂತರ ಸಾಲಿನಲ್ಲಿ ರೈತರನ್ನೂ ಉದ್ಯಮಿಗಳನ್ನಾಗಿ ಮಾಡುವ ಮಹದಾಸೆ ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕ-ರೈತರ ನಡುವೆ ಸೇತುವೆಯಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಹೇಮಂತ್‌ಕುಮಾರ್, ಸ್ವಾಮಿಗೌಡ, ಮೂರ್ತಿ, ಗೋವರ್ಧನ್, ಸ್ಕಂದಸ್ವಾಮಿ, ನವೀನ್‌ಕುಮಾರ್, ದಾಸೇಗೌಡ, ಅಭಿಷೇಕ್ ಪಾಲ್ಗೊಂಡಿದ್ದರು