ರೈತ ಉತ್ಪಾದಕ ಕಂಪನಿ ತೆರೆಯಲು ಆರ್ಥಿಕ ನೆರವು

ಫೋಟೋ ಶೀರ್ಷಿಕೆ 24 ಸಿಆರ್_ಪಿ-1ಎ
Published on

ಚನ್ನರಾಯಪಟ್ಟಣ: ಮೌಲ್ಯಯುತ ಬೆಲೆಗೆ ಕೃಷಿ ಪದಾರ್ಥಗಳು ಮಾರಾಟವಾಗುವುದರ ಜತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ರೈತ ಉತ್ಪಾದಕ ಕಂಪನಿ ತೆರೆಯಲು ನಬಾರ್ಡ್ ಆರ್ಥಿಕ ನೆರವು ನೀಡಲಿದೆ ಎಂದು ನಬಾರ್ಡ್‌ನ ಬೆಂಗಳೂರು ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ಟಿ.ರಮೇಶ್ ಹೇಳಿದರು.


ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬೆಕ್ಕ ಗ್ರಾಮದ ಪ್ರಗತಿಪರ ರೈತ ರಾಘವೇಂದ್ರ ಎಂಬುವರ ತೋಟಕ್ಕೆ ಭೇಟಿ ನೀಡಿ ಕೃಷಿ ವೈವಿಧ್ಯ ವೀಕ್ಷಿಸಿದ ಬಳಿಕ ತೆಂಗು ರೈತರ ಉತ್ಪಾದಕ ಕಂಪನಿ ನಿರ್ದೇಶಕರ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಶ್ರವಣಬೆಳಗೊಳ ವ್ಯಾಪ್ತಿಯಲ್ಲಿ ತೆಂಗು ಉತ್ಪಾದಕರ ಕಂಪನಿ 662 ಷೇರು ಸದಸ್ಯರನ್ನು ಹೊಂದಿದ್ದು, 55 ಲಕ್ಷ ರೂ.ಗಳಿಗೆ ಎಳನೀರು ಮಾರಾಟ ಮಾಡಲಾಗಿದೆ. ಇನ್ನು ಕೃಷಿ ಪ್ರವಾಸೋದ್ಯಮಕ್ಕೆ ನಬಾರ್ಡ್ ಸಕಲ ರೀತಿಯಲ್ಲೂ ಅರ್ಥಿಕ ನೆರವು ನೀಡುತ್ತಿದ್ದು, ರೈತರು ಗುಣಮಟ್ಟದ ಉತ್ಪನ್ನವನ್ನು ತಯಾರಿಸಿ, ಮಾರಾಟ ಮಾಡಬೇಕು ಎಂದರು.


ತಾಲೂಕಿನಲ್ಲಿ ತೆಂಗು ಪ್ರಮುಖ ಬೆಳೆಯಾಗಿದ್ದು, ತೆಂಗಿನ ಎಣ್ಣೆ ಮತ್ತು ಇತರ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ತೆಂಗು ಬೆಳೆಗಾರರು ಕಂಪನಿ ಷೇರುದಾರರಾಗಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನಬಾರ್ಡ್‌ನ ಜಿಲ್ಲಾ ನಿರ್ದೇಶಕಿ ಮಾಲಿನಿ ಸುವರ್ಣಾ, ತೆಂಗು ಉತ್ಪಾದಕರ ಕಂಪನಿ ಅಧ್ಯಕ್ಷ ಬಿ.ರಾಘವೇಂದ್ರ ಬೆಕ್ಕ, ಪ್ರೋಗ್ರಾಮ್ ಮೇನೇಜರ್ ಗಿರೀಶ್, ಫೀಲ್ಡ್ ಆಫೀಸರ್ ಬಸವರಾಜ್, ನಿರ್ದೇಶಕರಾದ ಡಿ.ಜಗದೀಶ್‌ಚಂದ್ರ, ಎಚ್.ಆರ್.ಅಶೋಕ್, ಬಿ.ಎಸ್.ಮಂಜಪ್ಪ, ಎಂ.ಕೆ.ಪ್ರದೀಪ್, ಬಿ.ಎಸ್.ರೇವಣ್ಣ, ಬಿ.ಎನ್.ಉಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net