

ಗುಂಡ್ಲುಪೇಟೆ: ರೈತರ ಎಲ್ಲ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ದೊರಕುವಂತೆ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕ್ರಮ ಕೈಗೊಂಡಿದೆ ಎಂದು ಎಪಿಎಂಸಿ ಅಧ್ಯಕ್ಷ ರವಿ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗುರುವಾರ ರೈತರ ಉತ್ಪನ್ನಗಳ ಇ-ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ಸಂತೆಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪದಿಂದ ರೈತರ ಉತ್ಪನ್ನಗಳಿಗೆ ಕಡಿಮೆ ಬೆಲೆ ದೊರಕುತ್ತಿತ್ತು. ಕಮಿಷನ್ ದಂಧೆಯಿಂದ ವ್ಯಾಪಾರಿಗಳು ಮತ್ತು ರೈತರು ಶೋಷಣೆಗೆ ಒಳಗಾಗುತ್ತಿದ್ದರು. ಸುಗ್ಗಿ ಸಂದರ್ಭದಲ್ಲಿಯೇ ಕಡಿಮೆ ಬೆಲೆ ನಿಗದಿಪಡಿಸುವ ಮೂಲಕ ರೈತರನ್ನು ನಷ್ಟಕ್ಕೆ ದೂಡಲಾಗುತ್ತಿತ್ತು. ಆದ್ದರಿಂದ ಎಪಿಎಂಸಿಯು ಎಲ್ಲ ಉತ್ಪನ್ನಗಳನ್ನು ಇ-ಟೆಂಡರ್ ನೇರ ಮಾರಾಟ ಮೂಲಕ ಖರೀದಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಎಲ್ಲ ಉತ್ಪನ್ನಗಳಿಗೂ ಅವುಗಳ ಗುಣಮಟ್ಟದ ಮೇಲೆ ಸ್ಪರ್ಧಾತ್ಮಕ ಬೆಲೆ ನಮೂದಿಸುವುದರಿಂದ ರೈತರಿಗೆ ಉತ್ತಮ ಬೆಲೆ ದೊರಕಲಿದೆ ಎಂದು ವಿವರಿಸಿದರು.
ಈ ಮೊದಲ ಪ್ರತಿ ಗುರುವಾರ ಮಾತ್ರ ಖರೀದಿ ಪ್ರಕ್ರಿಯೆ ಇತ್ತು. ಮುಂದಿನ ವಾರದಿಂದ ಸೋಮವಾರವೂ ಆರಂಭಿಸಿ ಒತ್ತಡ ಕಡಿಮೆ ಮಾಡಲಾಗುವುದು. ಬೆಳಗಿನಿಂದಲೂ ಸಂತೆಯಲ್ಲಿ ಓಡಾಡಿ ರೈತರಿಗೆ ಈ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಇನ್ಮುಂದೆ ಎಲ್ಲ ಉತ್ಪನ್ನವನ್ನೂ ಇ-ಟೆಂಡರ್ ಮೂಲಕವೇ ಮಾರಾಟ ಮಾಡಲು ರೈತರು ಹಾಗೂ ವ್ಯಾಪಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಎಪಿಎಂಸಿ ನಿರ್ದೇಶಕರಾದ ಪಿ.ಮಹದೇವಪ್ಪ, ಮಾಡ್ರಹಳ್ಳಿ ಮಹದೇವಪ್ಪ, ನಾಗರಾಜು, ಆರ್.ಎಸ್.ನಾಗರಾಜು, ಮಹೇಶ್, ವಿರೂಪಾಕ್ಷ, ಕಾರ್ಯದರ್ಶಿ ಶ್ರೀಧರ್, ಅಧಿಕಾರಿ ಎ.ಎಲ್.ಮಹೇಶ್, ರೈತ ಮುಖಂಡ ಟಿ.ಎಸ್.ಶಾಂತಮಲ್ಲಪ್ಪ, ಶ್ರೀಕಾಂತ್, ಚಿರಕನಹಳ್ಳಿ ರವಿ ಇತರರು ಇದ್ದರು.