ರೈತ ಆತ್ಮಹತ್ಯೆ ವಿಚಾರದಲ್ಲಿ ಸಚಿವರದ್ದು ಬೇಜವಾಬ್ದಾರಿ ಹೇಳಿಕೆ

Minister's irresponsible statement regarding farmer suicide
ಮಾಜಿ ಶಾಸಕ ರಮೇಶ ಭೂಸನೂರ
Published on

ಸಿಂದಗಿ: ರಾಜ್ಯದಲ್ಲಿ ಮಳೆ ಇಲ್ಲ. ಬೆಳೆದ ಬೆಳೆಯೂ ದಕ್ಕುತ್ತಿಲ್ಲ. ಬದುಕಿಗಾಗಿ ಮಾಡಿದ ಸಾಲ ತೀರಿಲ್ಲ. ಇಂತಹ ವೇಳೆಯಲ್ಲಿ ಸಚಿವ ಶಿವಾನಂದ ಪಾಟೀಲ ಬೇಜವಾಬ್ದಾರಿ ಹೇಳಿಕೆ ನೀಡುವುದು ಸಲ್ಲ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ಬುಧವಾರ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿರುವಾಗಲೆಲ್ಲ ಕಾಂಗ್ರೆಸ್ ರೈತ ಹಾಗೂ ಜನ ವಿರೋಧಿ ನೀತಿಗಳಿಂದ ಆಡಳಿತ ನಡೆಸಿದೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸಿಗುತ್ತಿಲ್ಲ. ಅಲ್ಲದೇ ವಿದ್ಯುತ್ ಇಲಾಖೆ ಸಚಿವರು ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂಬ ಮಾತನ್ನು ಹೇಳಿದ್ದು ಆಶ್ಚರ್ಯಕರ ಎಂದರು.

ನಮ್ಮ ಸರ್ಕಾರದ ವೇಳೆ ರೈತರಿಗೆ 7ತಾಸು ವಿದ್ಯುತ್ ನೀಡಲಾಗುತ್ತಿತ್ತು. ಸದ್ಯ ಅದು ಈ ಸರ್ಕಾರದಲ್ಲಿ 2 ತಾಸು ಸಿಗುತ್ತಿಲ್ಲ. ಸುಟ್ಟ ಟಿಸಿಗಳನ್ನು ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡುತ್ತಿಲ್ಲ. ಸರ್ಕಾರ ಹಾಗೂ ಸಚಿವರು ಮತ್ತು ಶಾಸಕರು ರಾಜ್ಯದ ರೈತರ ಬದುಕಿಗೆ ಆಶಾದಾಯಕ ನಿಲುವನ್ನು ತಳೆದಿಲ್ಲ. ಗುತ್ತಿಗೆದಾರರಿಗೂ ಬಿಲ್ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು.

ಕ್ಷೇತ್ರದಲ್ಲಿ ನನ್ನ ಅಧಿಕಾರವಧಿಯಲ್ಲಿ ಯಾವುದೇ ದ್ವೇಷ ರಾಜಕಾರಣ ಮಾಡಿಲ್ಲ. ಆದರೆ ಹಾಲಿ ಶಾಸಕರು ನನ್ನ ಅವಧಿಯಲ್ಲಿ ಆದಿಜಾಂಭವ ನಿಗಮದಡಿ ನೇರಸಾಲಕ್ಕೆ ಅರ್ಹರಾದ ಫಲಾನುಭವಿಗಳ ಪಟ್ಟಿಯನ್ನು ಪರಿಗಣಿಸದಂತೆ ತಿಳಿಸಿದ್ದಾರೆ. ಯುವಕ ಪರಶುರಾಮ ಮಾದರ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದು, ಇನ್ನೂ ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾನೆ. ಕ್ಷೇತ್ರದ ಕೆಲವು ಕಾಮಗಾರಿಗಳ ಭೂಮಿಪೂಜೆ, ರಸ್ತೆ ಕಾಮಗಾರಿಗಳ ಪೂಜೆಗಳಲ್ಲೂ, ಈ ಹಿಂದೆ ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಜೂರಾದ 500ಕ್ಕೂ ಹೆಚ್ಚು ವಸತಿ ಮನೆಗಳ ಫಲಾನುಭವಿಗಳ ಆಯ್ಕೆಯಲ್ಲೂ ದ್ವೇಷದ ರಾಜಕಾರಣ ಮಾಡಲಾಗುತ್ತಿದ್ದು ಅದು ನಿಲ್ಲಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ನಿರ್ಮಾಣಗೊಳ್ಳಬೇಕಿರುವ ಕಲಾಸಾಮ್ರಾಟ ಹಂದಿಗನೂರ ಸಿದ್ರಾಮಪ್ಪನವರ ಭವನದ ಟೆಂಡರ್ ಆಗಿದೆ. ಗುತ್ತಿಗೆದಾರರ ನೇಮಕವೂ ಆಗಿದೆ. ಅಲ್ಲದೇ ಮೋರಟಗಿಯಿಂದ ಯರಗಲ್ಲ, ಬಿಸನಾಳ, ಮಂಗಳೂರ ಗ್ರಾಮದ ರಸ್ತೆ ಕಾಮಗಾರಿಗಳು ಮಂಜೂರಿಯಾಗಿದ್ದರೂ ನನ್ನ ಅವಧಿಯಲ್ಲಿನ ಕಾಮಗಾರಿಗಳು ಎಂದು ಜನ ಮೆಚ್ಚಿಕೊಳ್ಳುತ್ತಾರೆ ಎಂದು ಭೂಮಿ ಪೂಜೆಗೆ ಮುಂದಾಗುತ್ತಿಲ್ಲ ಎಂದು ಕೆಲವು ಗುತ್ತಿಗೆದಾರರು ಹೇಳುತ್ತಿರುವುದು ರಾಜಕಾರಣಕ್ಕಾಗಿ ಎಂದು ದೂರಿದರು.

ಸುದ್ದಿಗೋಷ್ಟಿಯಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿ ಗುರು ತಳವಾರ, ಬಸಯ್ಯ ಹಿರೇಮಠ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net