

ಚಿಕ್ಕಬಳ್ಳಾಪುರ: ರೇಷ್ಮೆ ತಾಯಿ ಚಿಟ್ಟೆ ಮತ್ತು ಮೊಟ್ಟೆಯಲ್ಲಿ ಮಾರಕ ಪೆಬ್ರಿನ್ ರೋಗ (ಗಂಟುರೋಗ) ವ್ಯಾಪಕವಾಗಿ ಪತ್ತೆಯಾಗಿರುವುದು ರೇಷ್ಮೆ ಕ್ಷೇತ್ರದಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಪರೀಕ್ಷೆಯ 193 ಮಾದರಿಗಳ ಪೈಕಿ 21ರಲ್ಲಿ ರೋಗ ದೃಢಪಟ್ಟಿದೆ. ಹಾಗೆಯೇ ಇದು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಆತಂಕಕ್ಕೊಳಗಾಗಿರುವುದರ ನಡುವೆ ರೇಷ್ಮೆ ಇಲಾಖೆಯು ವಿಳಂಬವಾಗಿ ಎಚ್ಚೆತ್ತುಕೊಂಡಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸೋಂಕು ಪತ್ತೆ ದೃಢಪಡಿಸಿಕೊಳ್ಳುವ ಉದ್ದೇಶದಿಂದ 22 ತಜ್ಞರನ್ನೊಳಗೊಂಡ ಸಮಿತಿ ರಚಿಸಿದ್ದು, ಈಗಾಗಲೇ ಸರ್ವೇ ಪ್ರಾರಂಭವಾಗಿದೆ. ಬೆಂ.ಗ್ರಾಮಾಂತರ, ರಾಮನಗರ ಸೇರಿ ಹಲವೆಡೆ ಕಾಯಿಲೆ ಹರಡಿದೆ. ಈಗಾಗಲೇ ಕೆಲವೆಡೆ ರೋಗಗ್ರಸ್ತ ರೇಷ್ಮೆತಾಯಿ ಚಿಟ್ಟೆ ಮತ್ತು ಮೊಟ್ಟೆಗಳನ್ನು ಬಿಸಾಡಿರುವ, ಇಲ್ಲವೇ ಸುಟ್ಟು ಹಾಕಿರುವ ಪ್ರಕರಣಗಳು ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊದಲು ರೇಷ್ಮೆಮೊಟ್ಟೆ, ತಾಯಿ ಚಿಟ್ಟೆ ಮತ್ತು ಹುಳುವಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಗುಣಮಟ್ಟ ಪರೀಕ್ಷಿಸಿ, ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಪರಿಹಾರ ಕೈಗೊಳ್ಳಲಾಗುತ್ತಿತ್ತು. ಆದರೆ, ಇದಕ್ಕೆ ಕಳೆದ ಕೆಲ ತಿಂಗಳಿಂದಲೂ ಇತಿಶ್ರೀ ಹಾಡಲಾಗಿದೆ. ಇದರಿಂದ ಅನೇಕ ಉತ್ಪಾದಕರು ಪೆಬ್ರಿನ್ ರೋಗಗ್ರಸ್ತ ಮೊಟ್ಟೆಯನ್ನು ಚಾಕಿ ಸಾಕಾಣಿಕೆ ಕೇಂದ್ರಗಳಿಗೆ ಮಾರುವ ಕೃತ್ಯಕ್ಕೆ ಇಳಿದಿದ್ದಾರೆ. ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ. ಇದು ಕಾಯಿಲೆ ವ್ಯಾಪಕವಾಗಿ ಹರಡಲು ಕಾರಣವಾಗಿದೆ. ಮೂರು, ನಾಲ್ಕನೇ ಹಂತದ ಜ್ವರದಲ್ಲಿ ಪೆಬ್ರಿನ್ ರೋಗ ಲಕ್ಷಣಗಳಿರುವುದು ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತಿದ್ದು, ಕೊನೆಗೆ ಬೇಸರದಲ್ಲಿ ರೋಗಗ್ರಸ್ತ ಹುಳವನ್ನು ತಿಪ್ಪೆಗೆ ಎಸೆಯುವಂತಾಗಿದೆ.
ಹಿಂದೆಯೂ ಕಾಡಿದ್ದ ಆತಂಕ: 1992ರಲ್ಲಿ ಪೆಬ್ರಿನ್ ರೋಗ ರೇಷ್ಮೆಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಅನೇಕ ರೈತರು ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು. ಇದರಿಂದ ರೇಷ್ಮೆ ಇಲಾಖೆ ಸೂಕ್ತ ಕ್ರಮ ಕೈಗೊಂಡು ಸೋಂಕು ನಿಯಂತ್ರಿಸಿತ್ತು. ಇದೀಗ ಮತ್ತೆ ಅದೇ ಕಾಯಿಲೆ ಕಾಣಿಸಿಕೊಂಡು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಪರಿಹಾರ ಕ್ರಮಗಳು: ರೇಷ್ಮೆ ಮೊಟ್ಟೆ ಬಿತ್ತನೆ ವಲಯದ ಹಂತದಲ್ಲಿಯೇ ರೋಗರಹಿತ ಮೊಟ್ಟೆಗಳ ತಯಾರಿಕೆಗೆ ಕಡ್ಡಾಯವಾಗಿ ತಾಯಿ ಚಿಟ್ಟೆ ಪರೀಕ್ಷೆ ಮಾಡಬೇಕು. ಇದಕ್ಕೆ ಏಕ ಚಿಟ್ಟೆ ಪರೀಕ್ಷೆ ಮತ್ತು ಗುಂಪು ಚಿಟ್ಟೆ ಪರೀಕ್ಷಾ ವಿಧಾನಗಳನ್ನು ಅನುಸರಿಸಬೇಕು. ಒಂದು ವೇಳೆ ರೋಗಾಣು ಕಂಡು ಬಂದಲ್ಲಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ರೋಗಗ್ರಸ್ತ ಚಿಟ್ಟೆಗಳ ಮೊಟ್ಟೆಗಳನ್ನು ಮಾರಲು ಅವಕಾಶ ನೀಡಬಾರದು ಎಂಬ ಒತ್ತಾಯ ಕೇಳಿ ಬಂದಿದೆ.
ವಿಳಂಬವಾಗಿ ಚುರುಕಾದ ಇಲಾಖೆ: ಪೆಬ್ರಿನ್ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಅಲರ್ಟ್ ಆದ ರೇಷ್ಮೆ ಇಲಾಖೆ ಅಧಿಕಾರಿಗಳು, ತಾಲೂಕಿನ ಚದಲಪುರ ಸಮೀಪದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಸೋಮವಾರ ರೈತರನ್ನೊಳಗೊಂಡ ಸಭೆ ಕೈಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಉಪ ನಿರ್ದೇಶಕ ಆಂಜನೇಯಗೌಡ, ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ, ನಿರೀಕ್ಷಕ ಪ್ರಕಾಶ್, ರೈತಪರ ಹೋರಾಟಗಾರ ಮಳ್ಳೂರು ಶಿವಣ್ಣ, ಬೆಳೆಗಾರರಾದ ನೆಲಮಾಕನಹಳ್ಳಿ ಗೋಪಾಲ್, ಟಿ.ಕೆ.ಮಂಜುನಾಥ್, ದೇವಿಶೆಟ್ಟಹಳ್ಳಿ ಸುಬ್ರಾಯಪ್ಪ, ಕುಪ್ಪಳ್ಳಿ ಮಂಜುನಾಥ್ ಮತ್ತಿತರರು ಇದ್ದರು.
2006 ರಲ್ಲಿ ರೇಷ್ಮೆ ಕಾಯ್ದೆಯನ್ನು ತಿದ್ದುಪಡಿ ಮೂಲಕ ದುರ್ಬಲಗೊಳಿಸಲಾಯಿತು. ಜಾಗೃತ ದಳವನ್ನು ನಿಷ್ಕ್ರಿಯಗೊಳಿಸಲಾಯಿತು. ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈಗಲಾದರೂ ಜಾಗೃತ ದಳದ ಮರು ಸ್ಥಾಪನೆ, ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕು. ಯಲುವಹಳ್ಳಿ ಸೊಣ್ಣೇಗೌಡ, ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕ, ಚಿಕ್ಕಬಳ್ಳಾಪುರ