ರೇಷ್ಮೆಗೂಡು ಆವಕ ಭಾರಿ ಇಳಿಕೆ, ರೈತರು ಮನೆಗಳಲ್ಲೇ ನೇರ ಮಾರಾಟ ಮಾಡುತ್ತಿರುವುದರಿಂದ ರೀಲರ್‌ಗಳ ಸಂಕಷ್ಟ, ನೂಲು ಬಿಚ್ಚಾಣಿಕೆದಾರರ ಬದುಕು ಬೀದಿಗೆ

28-vij-5a-cocoon market-prathibhatane
Published on

ವಿಜಯಪುರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ-ಹರಾಜು ಹಾಗೂ ಆನ್‌ಲೈನ್ ಹಣ ಪಾವತಿ ಆರಂಭವಾದ ನಂತರದಲ್ಲಿ ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕುಸಿದಿದೆ. ದಿನಕ್ಕೆ 8ರಿಂದ 10 ಲಾಟು ಬಂದರೆ ಹೆಚ್ಚಾಗುತ್ತಿದೆ. ಇದರಿಂದ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯವಾಗಿ ಸರ್ಕಾರದ ಗಮನಸೆಳೆಯುವಂತೆ ಬಿಚ್ಚ್ಚಾಣಿಕೆದಾರರು ಮಾರುಕಟ್ಟೆಯ ಪ್ರಭಾರ ಉಪನಿರ್ದೇಶಕ ಅಮರನಾಥ್ ಅವರಿಗೆ ಮನವಿಪತ್ರ ಅರ್ಪಿಸಿದರು.

ಪಟ್ಟಣದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ಕೇವಲ 8 ಲಾಟು ಆವಕವಾದ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಬಿಚ್ಚ್ಚಾಣಿಕೆದಾರರು, ರೈತರು ಮಾರುಕಟ್ಟೆಗೆ ಗೂಡು ತಂದು ಇಲ್ಲಿ ಹರಾಜು ಮಾಡುತ್ತಾರೆ. ಅದನ್ನು ಖರೀದಿಸುವ ಬಿಚ್ಚ್ಚಾಣಿಕೆದಾರರು ರೇಷ್ಮೆ ಮಾರುಕಟ್ಟೆಯ ಹೆಸರಿನಲ್ಲಿ ದೇವನಹಳ್ಳಿ ಎಚ್‌ಡಿಎ್ಸಿ ಬ್ಯಾಂಕ್‌ಗೆ ಹಣ ಪಾವತಿಸುತ್ತಾರೆ. ಸಂಜೆ ವೇಳೆಗೆ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತದೆ. ಕೆಲವೊಮ್ಮೆ ತಾಂತ್ರಿಕ ದೋಷದಿಂದ ಖಾತೆಗೆ ಜಮೆ ಆಗುವುದಿಲ್ಲ. ಇದರಿಂದಾಗಿ ರೈತರು ಮಾರುಕಟ್ಟೆಗೆ ಗೂಡು ತರುವ ಬದಲು, ಮನೆಗಳಲ್ಲೇ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಇದು ಮಾರುಕಟ್ಟೆಯಲ್ಲಿನ ಆವಕ ಕಡಿಮೆ ಆಗಲು ಕಾರಣ ಎಂದು ವಿವರಿಸಿದರು.

ನೂಲುಬಿಚ್ಚಾಣಿಕೆದಾರ ಜಮೀರ್ ಪಾಷಾ ಮಾತನಾಡಿ, ರೈತರು ಬ್ಯಾಂಕ್‌ಗಳಲ್ಲಿ ಕೃಷಿಸಾಲ ಸೇರಿ ಹಲವು ರೀತಿಯ ಸಾಲಗಳನ್ನು ಪಡೆದಿರುತ್ತಾರೆ. ಆದರೆ, ಸಕಾಲದಲ್ಲಿ ಸಾಲ ಮರುಪಾವತಿಸುವುದಿಲ್ಲ. ಹಾಗಾಗಿ, ಅವರ ಖಾತೆಗೆ ಹಣ ಜಮೆಯಾಗುತ್ತಲೇ ಬ್ಯಾಂಕ್‌ನವರು ಸಾಲದ ಖಾತೆಗೆ ಅದನ್ನು ವರ್ಗಾಯಿಸಿಕೊಳ್ಳುತ್ತಾರೆ. ಈ ಸಮಸ್ಯೆಯಿಂದಾಗಿ ರೈತರು ಮಾರುಕಟ್ಟೆಗೆ ಗೂಡು ತರುವ ಬದಲು ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ಗೂಡು ಖರೀದಿಸುವ ಬಿಚ್ಚ್ಚಾಣಿಕೆದಾರರಿಗೆ ತೀರಾ ತೊಂದರೆಯಾಗುತ್ತಿದ್ದು, ಬೀದಿಪಾಲಾಗುವ ಆತಂಕ ಉಂಟಾಗಿದೆ ಎಂದರು.

ರೈತ ಹನುಮಂತರಾಯಪ್ಪ ಮಾತನಾಡಿ, ಅಕಾಲಿಕ ಮಳೆಯಿಂದಾಗಿ ಖರೀದಿಸಲು ನಮಗೆ ಗುಣಮಟ್ಟದ ಚಾಕಿ ಸಿಗುತ್ತಿಲ್ಲ. ಹುಳುಗಳು 2ನೇ ಜ್ವರಕ್ಕೆ ಬರಲು ಸಾಧ್ಯವಾಗದ ಕಾರಣ, ಬೆಳೆ ನಷ್ಟವಾಗುತ್ತಿದೆ. ಹುಳುಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶ ಹೆಚ್ಚಿಸಿ, ಕಷ್ಟಪಟ್ಟು ಬೆಳೆದರೂ ಅರ್ಧ ಬೆಳೆ ಕೈ ಬಿಟ್ಟಿದೆ. ಸುಣ್ಣ ಕಟ್ಟು ರೋಗ, ಹಾಲುತೊಂಡೆ ಬರುತ್ತಿದೆ. ಹುಳುಗಳು ಅಲ್ಪಸ್ವಲ್ಪ ಗೂಡು ಕಟ್ಟಿದರೂ ನೂಲುಬಿಚ್ಚಾಣಿಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ನಮಗೂ ನಷ್ಟ, ಬಿಚ್ಚ್ಚಾಣಿಕೆದಾರರಿಗೂ ನಷ್ಟವಾಗುತ್ತಿದೆ ಎಂದು ಅಲವತ್ತುಕೊಂಡರು.

ಬ್ಯಾಂಕ್ ಸಿಬ್ಬಂದಿ ಸಾಲ ಮರುಪಾವತಿಗೆ ಒತ್ತಡ ಹಾಕುತ್ತಿದ್ದಾರೆ. ಹಿಪ್ಪುನೇರಳೆ ಸೊಪ್ಪು ಖರೀದಿಸಿ ಹುಳುಗಳನ್ನು ಮೇಯಿಸಲು ಸಾಧ್ಯವಾಗುತ್ತಿಲ್ಲ. ಖಾತೆಗೆ ಸಂದಾಯವಾದ ಹಣವನ್ನು ಬ್ಯಾಂಕ್‌ನವರು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಪರಿಚಯಸ್ಥ ರೀಲರುಗಳಿಗೆ ಗೂಡು ಕೊಟ್ಟು ಹಣ ಪಡೆಯುತ್ತಿದ್ದೇವೆ. ಸರ್ಕಾರ ಕೂಡ ಒಂದು ಕೆ.ಜಿ.ಗೂಡಿಗೆ 30 ರೂ. ಪ್ರೋತ್ಸಾಹಧನ ನೀಡುತ್ತಿತ್ತು. ಈಗ ಕೊಡುತ್ತಿಲ್ಲ. ಆದ್ದರಿಂದ ನಾವು ಮಾರುಕಟ್ಟೆಗೆ ಹೋಗುತ್ತಿಲ್ಲ. ಕೃಷ್ಣಪ್ಪ, ರೈತ ಮಾರುಕಟ್ಟೆಯಲ್ಲಿ ಗೂಡಿನ ಆವಕ ಕಡಿಮೆಯಾಗುತ್ತಿದೆ. ರೈತರು ತರುವ ಗೂಡಿನ ಹಣವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಬ್ಯಾಂಕ್‌ಗಳಲ್ಲಿ ಅವರು ಮಾಡಿಕೊಂಡಿರುವ ಸಾಲಕ್ಕೆ ಹಣ ಕಡಿತ ಆಗುತ್ತದೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಆದರೆ ರೈತರಿಗೆ ತಲುಪಬೇಕಾಗಿರುವ ಹಣವನ್ನು ಸಮರ್ಪಕವಾಗಿ ತಲುಪಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ. ನೂಲುಬಿಚ್ಚಾಣಿಕೆದಾರರ ಮನವಿಯನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುವುದು. ಅಮರನಾಥ್, ರೇಷ್ಮೆಗೂಡು ಮಾರುಕಟ್ಟೆ ಪ್ರಭಾರ ಉಪನಿರ್ದೇಶಕ ವಿಜಯಪುರ ಒಂದರಲ್ಲೇ ನೂರಾರು ಮಂದಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ದಿನಕ್ಕೆ ಕೇವಲ 8ರಿಂದ 10 ಲಾಟು ರೇಷ್ಮೆಗೂಡು ಬರುತ್ತಿದೆ. ಇದರಿಂದಾಗಿ ಉಳಿದವರಿಗೆ ಕೆಲಸವಿಲ್ಲದಂತಾಗುತ್ತಿದೆ. ಅವರನ್ನೇ ನೆಚ್ಚಿಕೊಂಡು, ಕೆಲಸ ಮಾಡುವವರ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಬಾಬಾಜಾನ್, ನೂಲು ಬಿಚ್ಚಾಣಿಕೆದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net