ರೇಷ್ಮೆ ಮಾರುಕಟ್ಟೆಯಲ್ಲಿ ರೈತನ ಮೇಲೆ ಹಲ್ಲೆ ಹಿನ್ನೆಲೆ ಡಿವೈಎಸ್‌ಪಿ ನೇತೃತ್ವದಲ್ಲಿ ಶಾಂತಿ ಸಭೆ

2
Published on

ರಾಮನಗರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ ಒಬ್ಬರು ರೈತನಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಡಿವೈಎಸ್‌ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಸೋಮವಾರ ಶಾಂತಿ ಸಭೆ ನಡೆಯಿತು.

ಜಿಲ್ಲಾ ಪೊಲೀಸ್ ಭವನದಲ್ಲಿ ಏರ್ಪಾಡಾಗಿದ್ದ ಸಭೆಯಲ್ಲಿ ರೈತ ಮುಖಂಡರು, ರೀಲರ್‌ಗಳು, ಪೊಲೀಸ್ ಅಧಿಕಾರಿಗಳು ಸೇರಿ ಹಲವರು ಪಾಲ್ಗೊಂಡಿದ್ದರು. ಘಟನೆ ಬಗ್ಗೆ ಎಲ್ಲರೂ ಬೇಸರ ವ್ಯಕ್ತಪಡಿಸಿದರು.

ರೇಷ್ಮೆ ಮಾರುಕಟ್ಟೆಯಲ್ಲಿ ರೈತರು ಮತ್ತು ರೀಲರ್‌ಗಳು ಸಹೋದರರಂತೆ ನಡೆದುಕೊಂಡಾಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂಬ ವಿಷಯವನ್ನು ಅಧಿಕಾರಿಗಳು ಮತ್ತು ರೈತ ಮುಖಂಡರು ಮನದಟ್ಟು ಮಾಡಿಕೊಟ್ಟರು.

ಇಂಥ ಘಟನೆಗಳು ಮರುಕಳಿಸದಂತೆ ಎಲ್ಲ ಮುನ್ನೆಚ್ಚರ ಕೈಗೊಳ್ಳುವುದಾಗಿ ರೀಲರ್‌ಗಳು ಭರವಸೆ ನೀಡಿದರು.

ದೋಷಗಳನ್ನು ಸರಿಪಡಿಸಿ: ಎಲ್ಲ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಇರುವ ದೋಷಗಳೇ ಮೂಲಕಾರಣ. ಅವನ್ನು ನಿವಾರಿಸದ ಹೊರತು ಸಮಸ್ಯೆ ಪರಿಹಾರವಾಗುವುದಿಲ್ಲ. ಕೂಡಲೇ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ನಿರ್ಧರಿಸುವ ಮೂಲಕ 15 ದಿನಗಳಲ್ಲಿ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಹಾಡಬೇಕು. ಆನ್‌ಲೈನ್‌ನಲ್ಲೇ ಹಣ ಬಟವಾಡೆ ಆಗಬೇಕು. ಹರಾಜಿನ ನಂತರ ಯಾವುದೇ ಕಾರಣಕ್ಕೂ ರೈತರಾಗಲಿ, ರೀಲರ್‌ಗಳಾಗಲಿ ಮತ್ತೆ ಚೌಕಾಸಿಗೆ ಇಳಿಯಬಾರದು. ಇಬ್ಬರು ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು ಎಂದು ಸಭೆಯಲ್ಲಿದ್ದವರು ಆಗ್ರಹಿಸಿದರು.

ಪ್ರವೇಶದ್ವಾರದಲ್ಲೇ ತೂಕ ಮಾಡಿ: ರೈತರು ತರುವ ಗೂಡನ್ನು ಮಾರುಕಟ್ಟೆ ಪ್ರವೇಶದ್ವಾರದಲ್ಲೇ ತೂಕ ಮಾಡಿ ಬಿಡ್ಡಿಂಗ್ ಚೀಟಿ ನೀಡಬೇಕು. ಕೆಟ್ಟು ನಿಂತಿರುವ ಸಿಸಿ ಕ್ಯಾಮರಾಗಳನ್ನು ದುರಸ್ತಿ ಮಾಡಿಸಬೇಕು. ಮಾರುಕಟ್ಟೆ ರೀಲರ್‌ಗಳು ಮತ್ತು ರೈತರು ಒಬ್ಬರೇ ಇಲ್ಲವೇ ತಮ್ಮೊಟ್ಟಿಗೆ ಮತ್ತೊಬ್ಬರನ್ನು ಮಾತ್ರ ಕರೆತರುವ ನಿಯಮ ಜಾರಿಗೊಳಿಸಬೇಕು. ರೈತರಿಗೂ ಗುರುತಿನಚೀಟಿ ಕಡ್ಡಾಯಗೊಳಿಸಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂದಿತು. ಮಾರುಕಟ್ಟೆ ಉಪನಿರ್ದೇಶಕ ಮಾರಪ್ಪ, ಸಹಾಯಕ ನಿರ್ದೇಶಕ ವೆಂಕಟೇಶ್, ಸಿಪಿಐ ಮೋಹನ್ ರೆಡ್ಡಿ, ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಆಣಿಗೆರೆ ಮಲ್ಲಯ್ಯ, ಕೆ. ರವಿ, ಗೌತಮ್‌ಗೌಡ ಮತ್ತಿತರರಿದ್ದರು.

ಪೊಲೀಸ್ ಔಟ್‌ಪೋಸ್ಟ್‌ಗೆ ಆಗ್ರಹ: ಪದೇಪದೆ ರೈತರು ಮತ್ತು ರೀಲರ್‌ಗಳ ನಡುವೆ ಜಗಳಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳೂ ಸಾಮಾನ್ಯವಾಗುತ್ತಿವೆ. ಆದ್ದರಿಂದ, ಮಾರುಕಟ್ಟೆಯಲ್ಲಿ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸಬೇಕು ಎಂದು ಸಭೆಯಲ್ಲಿದ್ದವರು ಒತ್ತಾಯಿಸಿದರು. ಭದ್ರತೆಗಾಗಿ ಹೋಂ ಗಾರ್ಡ್‌ಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುವಂತೆ ಮಾರುಕಟ್ಟೆ ಅಧಿಕಾರಿಗಳು ಮನವಿ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net