ರೇಷ್ಮೆ ಮಾರುಕಟ್ಟೆಯಲ್ಲಿ ಮತ್ತೆ ಕೈಕೊಟ್ಟ ವೈಫೈ : ಇ-ಹರಾಜು ಸ್ಥಗಿತಗೊಂಡು ರೈತರು ಕಂಗಾಲು

11klgphoto-7....
Published on
  • ಚಾಮರಾಜನಗರ : ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ರೇಷ್ಮೆ ಮಾರುಕಟ್ಟೆಯಲ್ಲಿ ಏರ್ಪಟ್ಟ ವೈಫೈ ಸಮಸ್ಯೆಯಿಂದ ಇ-ಹರಾಜು ಪ್ರಕ್ರಿಯೆ ನಡೆಯದಿದ್ದರಿಂದ ಆಕ್ರೋಶಗೊಂಡ ರೈತರು ರಾಷ್ಟ್ರೀಯ ಹೆದ್ದಾರಿ(209) ತಡೆದು ಪ್ರತಿಭಟಿಸಿದರು.

  • ಎರಡು ದಿನ ಹಿಂದೆಯೂ ಮಾರುಕಟ್ಟೆಯಲ್ಲಿ ವಿದ್ಯುತ್ ಹಾಗೂ ವೈಫೈ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸಕಾಲಕ್ಕೆ ರೇಷ್ಮೆ ವಹಿವಾಟು ನಡೆದಿರಲ್ಲಿಲ್ಲ. ರೇಷ್ಮೆ ನೂಲು ಬಿಚ್ಚಣಿಕೆದಾರರು ಬೆಳಗ್ಗೆ 10.30 ಗಂಟೆಗೆ ಆನ್‌ಲೈನ್ ಮೂಲಕ ಇ-ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ರೈತರ ಗೂಡು ಖರೀದಿಸಬೇಕಿತ್ತು. ಆದರೆ, ಇವೆಲ್ಲ ವಹಿವಾಟು ಸ್ಥಗಿತಗೊಂಡಿದ್ದರಿಂದ ರೈತರು ಆಕ್ರೋಶಗೊಂಡು ಮಾರುಕಟ್ಟೆ ಮುಂಭಾಗದ ಹೆದ್ದಾರಿ ರಸ್ತೆ ತಡೆ ನಡೆಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

  • ಅಂತೆಯೇ, ಭಾನುವಾರ ಸಹ ವೈಫೈ ಕೈಕೊಟ್ಟು ಇ-ಹರಾಜು ನಡೆಯದ ಕಾರಣಕ್ಕೆ ರೈತರು 10 ನಿಮಿಷ ಕಾಲ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ್ದಾರೆ. ಅಷ್ಟರಲ್ಲಿ ಮಾರುಕಟ್ಟೆ ಡಿಡಿ ಮಹದೇವಯ್ಯ ರೈತರನ್ನು ಮನವೊಲಿಸಿ ಒಳಗೆ ಕರೆದೊಯ್ದಿದ್ದಾರೆ.


  • ವಿಚಾರ ತಿಳಿದ ಡಿವೈಎಸ್‌ಪಿ ಜಿ.ಯು ಸೋಮೇಗೌಡ ಹಾಗೂ ಪಿಎಸ್‌ಐ ಮಹೇಶ್ ಮಾರುಕಟ್ಟೆಗೆ ಭೇಟಿ ನೀಡಿ ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಆಗಿರುವುದು ವೈಫೈ ಸಮಸ್ಯೆ. ಅದಕ್ಕೆ ರಸ್ತೆ ತಡೆ ಏಕೆ ಮಾಡ್ತೀರಿ. ದೂರು ನೀಡಿದರೆ ನಾವೇ ಬಂದು ಸಮಸ್ಯೆ ಬಗೆಹರಿಸುತ್ತೇವೆ. ಇನ್ನೊಮ್ಮೆ ಈ ರೀತಿ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಈ ವೇಳೆ ಮಳ್ಳವಳ್ಳಿ, ಮಂಡ್ಯ, ರಾಮನಗರ, ಕನಕಪುರ ಸೇರಿದಂತೆ ಅನೇಕ ಕಡೆಗಳಿಂದ ಬಂದಿದ್ದ ರೈತರು ಪೊಲೀಸರ ಎದುರು ತಮ್ಮ ಅಳಲು ತೋಡಿಕೊಂಡರು.

  • ಗೂಡು ಮಾರಾಟ:
    ಕೊನೆಗೂ ವೈಫೈ ಸರಿಯಾಗದ ಹಿನ್ನೆಲೆಯಲ್ಲಿ ರೈತರು ನೂಲು ಬಿಚ್ಚಣಿಕೆದಾರ (ರೀಲರ್ಸ್) ಜತೆ ಹೊಂದಾಣಿಕೆ ಮಾಡಿಕೊಂಡು ಮಾರುಕಟ್ಟೆ ಹೊರಗಡೆ ತೂಕದ ಸ್ಕೇಲ್ ಮೂಲಕ ರೇಷ್ಮೆ ಗೂಡನ್ನು ತೂಗಿ ವಹಿವಾಟು ನಡೆಸಿದರು. ಪ್ರತಿಭಟನೆಯಲ್ಲಿ ರವೀಶ್ ಹೊನ್ನ ನಿಂಗಹಳ್ಳಿ, ನಾಗೇಂದ್ರ ಕಂದೇಗಾಲ, ಲೋಕೇಶ್ ಅಂಚೆದೊಡ್ಡಿ ನಾಗರಾಜು, ಬಸವರಾಜು ಕನಕಪುರ, ರವಿ, ಕೆ.ಎಂ ದೊಡ್ಡಿ, ಮುತ್ತುರಾಜು, ದರ್ಶನ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net