

ರಾಮನಗರ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರೊಂದಿಗೆ ರೀಲರ್ ಒಬ್ಬರು ನಡೆಸಿದ ದುಂಡಾ ವರ್ತನೆ ವಿಡಿಯೋ ವೈರಲ್ ಆಗಿದ್ದು, ರೈತರು, ರೈತ ಸಂಘಟನೆಗಳ ಒತ್ತಾಯಕ್ಕೆ ಮಣಿದು ರೀಲರ್ ವಿರುದ್ಧ ಕ್ರಮಕ್ಕೆ ಮಾರುಕಟ್ಟೆ ಅಧಿಕಾರಿಗಳು ಮುಂದಾಗಿದ್ದಾರೆ.
ರೇಷ್ಮೆಗೂಡು ಮಾರುಕಟ್ಟೆಗೆ ಜ.12ರಂದು ಹಾವೇರಿ ಜಿಲ್ಲೆಯಿಂದ ವಿರೂಪಾಕ್ಷ ಎಂಬ ರೇಷ್ಮೆ ಬೆಳೆಗಾರ ಗೂಡು ತಂದಿದ್ದರು. ಈ ವೇಳೆ ಪ್ರತಿ ಕೆ.ಜಿ. ಗೂಡಿಗೆ 550 ರೂ.ನಂತೆ ಆನ್‌ಲೈನ್ ಬಿಡ್ ನಡೆದಿದೆ. ಆದರೆ, ಗೂಡು ಖರೀದಿಸಿದ ರೀಲರ್ ಹರಾಜಿನ ವೇಳೆ ತಪ್ಪಾಗಿ 550 ರೂ. ಎಂದು ಬಿಡ್ ಮಾಡಿದ್ದೇನೆ. ಹಾಗಾಗಿ ಕೆ.ಜಿ.ಗೆ 100 ರೂಪಾಯಿ ಕಡಿಮೆ ನೀಡುತ್ತೇನೆ ಎಂದು ರೈತರಿಗೆ ಹೇಳಿ ಗೂಡು ತುಂಬಲು ಮುಂದಾಗಿದ್ದಾರೆ. ಈ ವೇಳೆ ವಿರೂಪಾಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಇದರಿಂದ ಕುಪಿತಗೊಂಡ ರೀಲರ್ ರೈತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ರೈತ ಕೈ ಮುಗಿದು ಬೇಡಿಕೊಂಡರೂ ಬೈಯ್ಯುವುದನ್ನು ನಿಲ್ಲಿಸಲೇ ಇಲ್ಲ. ಈ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು.
ಆಕ್ರೋಶ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರೈತನ ಮೇಲೆ ಹಲ್ಲೆಗೆ ಮುಂದಾದ ರೀಲರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಗ್ರಹ ವ್ಯಕ್ತವಾಯಿತು. ಅಲ್ಲದೆ, ಕೆಲವು ರೈತ ಸಂಘಟನೆಗಳು ಮಾರುಕಟ್ಟೆಗೆ ತೆರಳಿ ರೀಲರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಅಧಿಕಾರಿಗಳು ರೀಲರ್‌ಗಳ ಸಭೆ ಕರೆದು ರೈತರೊಡನೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಬೇಕು. ಮಾರುಕಟ್ಟೆ ಸಿಬ್ಬಂದಿ ರೀಲರ್ಸ್‌ಗಳೊಂದಿಗೆ ಶಾಮೀಲಾಗಿ ರೈತರನ್ನು ವಂಚಿಸುತ್ತಿದ್ದಾರೆ. ಈ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣನಾದ ರೀಲರ್‌ನ ಪರವಾನಗಿ ರದ್ದು ಮಾಡಿ, ದೂರು ದಾಖಲು ಮಾಡಬೇಕು. ಈ ರೀತಿ ಘಟನೆಗಳು ಮರುಕಳಿಸದಂತೆ ನಾಲ್ಕು ದಿನಗಳಲ್ಲಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿ, ರೈತರಿಗೆ ರಕ್ಷಣೆ ಒದಗಿಸಬೇಕು. ಮಾರುಕಟ್ಟೆ ಆವರಣದಲ್ಲಿ ರೈತರ ರಕ್ಷಣೆಗಾಗಿ ಔಟ್‌ಪೋಸ್ಟ್ ತೆರೆಯಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು, ಮಲ್ಲಯ್ಯ, ಕೆ.ಎನ್. ರಾಜು, ಪುಟ್ಟಸ್ವಾಮಿ, ಕಷ್ಣಯ್ಯ, ಶಶಿಕುಮಾರ್ ಮುಂತಾದವರು ಇದ್ದರು.
ದೂರು ದಾಖಲು ಈ ನಡುವೆ ರೈತರ ಆಕ್ರೋಶ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೀಲರ್ ವಿರುದ್ಧ ಕ್ರಮಕ್ಕೆ ಆಗ್ರಹ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಮಾರುಕಟ್ಟೆ ಅಧಿಕಾರಿಗಳು ರಾಮನಗರ ಐಜೂರು ಠಾಣೆಯಲ್ಲಿ ರೀಲರ್ ಮುನೀರ್ ಅಹಮದ್ ವಿರುದ್ಧ ದೂರು ದಾಖಲು ಮಾಡಿದರು. ನಂತರ ಮಾರುಕಟ್ಟೆ ಹಿತರಕ್ಷಣಾ ಸಮಿತಿ ಸದಸ್ಯರು ಸೇರಿ ಹಲವರು ರೈತ ವಿರೂಪಾಕ್ಷ ವಿರುದ್ಧವೂ ಮಾರುಕಟ್ಟೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ರೈತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಕೊನೆಗಾಣಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ರೈತರು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಕೆ. ರವಿ, ಮಾರುಕಟ್ಟೆ ಅಭಿವೃದ್ಧಿ ಸಮಿತಿ ಸದಸ್ಯ