ರೇಷ್ಮೆ ಬಿತ್ತನೆ ಮೊಟ್ಟೆಗೆ ಗಂಟುಬಿದ್ದ ಗಂಟುರೋಗ, ಉದ್ಯಮಕ್ಕೆ ಬೀಳಲಿದೆ ಕೊಡಲಿಪೆಟ್ಟು, ವಿ.ಬಾಲಸುಬ್ರಮಣ್ಯಂ ಆತಂಕ

2
Published on

ಬೆಂಗಳೂರು ಗ್ರಾಮಾಂತರ: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರವಾಗಿ ಹರಡುತ್ತಿರುವ ಗಂಟುರೋಗ (ಪೆಬ್ರಿನ್) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ವರ್ಷದೊಳಗೆ ರೇಷ್ಮೆ ಉದ್ಯಮಕ್ಕೆ ಕೊಡಲಿಪೆಟ್ಟು ಬೀಳಲಿದೆ ಎಂದು ಭಾರತೀಯ ರೇಷ್ಮೆ ಒಕ್ಕೂಟ (ಸಿಲ್ಕ್ ಅಸೋಸಿಯೇಷನ್ ಇಂಡಿಯಾ) ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ ಆತಂಕ ವ್ಯಕ್ತಪಡಿಸಿದ್ದಾರೆ.

ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ತಾಯಿ ಚಿಟ್ಟೆಯಿಂದ ಹರಡುವ ಸೋಂಕು ಡಿಸೆಂಬರ್‌ನಲ್ಲಿ ಉಲ್ಬಣಗೊಳ್ಳಲಿದೆ ಎಂದು ರೇಷ್ಮೆ ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ, ಬಿತ್ತನೆ ಪ್ರದೇಶಗಳಲ್ಲಿ ಚಿಟ್ಟೆ ಪರೀಕ್ಷೆ, ಸೋಂಕು ನಿವಾರಣೆ, ಸಾಮೂಹಿಕ ಸೋಂಕು ನಿವಾರಣೆ ಹಾಗೂ ಬಿತ್ತನೆ ಮಾರುಕಟ್ಟೆಯಲ್ಲಿ ನೂಲು ಬಿಚ್ಚಾಣಿಕೆಗೆ ಹೋಗುವ ಗೂಡಿಗೆ ಹಬೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕಿತ ರೇಷ್ಮೆ ಮೊಟ್ಟೆಗಳನ್ನು ಹಾಗೂ ಹುಳುಗಳನ್ನು ಸುಟ್ಟು ಹಾಕಬೇಕು. ತಜ್ಞ ಸಿಬ್ಬಂದಿಯನ್ನು ಕೂಡಲೇ ಗಂಟುರೋಗ ಸೋಂಕಿತ ಪ್ರದೇಶಗಳಿಗೆ ನಿಯೋಜಿಸಿ ಗುಣಮಟ್ಟ ಪರೀಕ್ಷೆ ಮಾಡಿಸಿ ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

ಈ ಹಿಂದಿನ ಕ್ರಮವನ್ನೇ ಅನುಸರಿಸಬೇಕು: ರಾಜ್ಯದಲ್ಲಿ ಈಗಾಗಲೇ 46 ಬ್ಯಾಚ್‌ಗಳಲ್ಲಿ ರೋಗಾಣು ಕಂಡುಬಂದಿದೆ, ಇದರ ಸಂತತಿಯನ್ನು ಸಂಪೂರ್ಣ ನಾಶಪಡಿಸಬೇಕು, ರೇಷ್ಮೆ ಸಾಕಣೆ ಮನೆಗಳಲ್ಲಿ ಸೋಂಕು ನಿವಾರಿಸಬೇಕು, ಬಿತ್ತನೆ ಕೋಠಿ ಪಿ4, ಪಿ3, ಪಿ2 ಮತ್ತು ಪಿ1 ಹಂತದಲ್ಲಿ ರೋಗ ಪತ್ತೆಹಚ್ಚಿ ನಿವಾರಿಸಬೇಕು. 1991-92ನೇ ಸಾಲಿನಲ್ಲಿ ರಾಜ್ಯದಲ್ಲಿ ಗಂಟುರೋಗ ಉಲ್ಬಣಗೊಂಡಿದ್ದಾಗ ಅನುಸರಿಸಿದ್ದ ಕ್ರಮಗಳನ್ನು ಈಗಲೂ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರೇಷ್ಮೆ ಇಲಾಖೆ ಶೇ 1.5ರಿಂದ 2ರಷ್ಟು ಬಿತ್ತನೆ ಮೊಟ್ಟೆಗಳಿಗೆ ಸೋಂಕು ತಗುಲಿದೆ ಎಂದಿದ್ದಾರೆ. ವಾಸ್ತವವಾಗಿ ಶೇ.20 ಮೊಟ್ಟೆಗಳಿಗೆ ರೋಗ ತಗುಲಿದೆ. ಈ ಹಂತದಲ್ಲಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷ ಮಾಡಿದರೆ ಉದ್ಯಮಕ್ಕೆ ಭಾರಿ ಪೆಟ್ಟುಬೀಳಲಿದೆ ಎಂದು ಎಚ್ಚರಿಸಿದ್ದಾರೆ.

ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಚಿಟ್ಟೆ ಪರೀಕ್ಷಕರ ಕೊರತೆಯಿಂದಾಗಿ ರೋಗ ಉಲ್ಬಣಗೊಂಡಿದೆ. ಮತ್ತೊಂದೆಡೆ, ಸರ್ಕಾರಗಳ ಸಂಶೋಧನಾ ಸಂಸ್ಥೆಗಳಲ್ಲಿ ಬೆರಳೆಣಿಕೆಯಷ್ಟು ವಿಜ್ಞಾನಿಗಳಿದ್ದು, ಅವೂ ಮುಚ್ಚುವ ಹಂತದಲ್ಲಿವೆ. ಸಂಸ್ಥೆ ಬಲಪಡಿಸಿ ಸಮರ್ಥ ವಿಜ್ಞಾನಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಕ್ಕೆ ರೇಷ್ಮೆ ಇತಿಹಾಸ: ರಾಜ್ಯದಲ್ಲಿ ರೇಷ್ಮೆ ಕೃಷಿಗೆ 200 ವರ್ಷದ ಇತಿಹಾಸವಿದೆ. ರೇಷ್ಮೆ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತ 2ನೇ ಸ್ಥಾನದಲ್ಲಿದ್ದು, ಇದರಲ್ಲಿ ರಾಜ್ಯದ ಪಾಲು ಶೇ.70ಕ್ಕಿಂತಲೂ ಹೆಚ್ಚಿತ್ತು, ಆದರೆ, ಇದೀಗ 50ಕ್ಕಿಂತಲೂ ಕಡಿಮೆ ಆಗಿದೆ. ಚೀನಾ ರೇಷ್ಮೆ ಉತ್ಪಾದನೆ 2 ವರ್ಷದ ಹಿಂದೆ 1,60,00 ಮೆಟ್ರಿಕ್ ಟನ್‌ಗಳಷ್ಟಿತ್ತು ಪ್ರಸ್ತುತ 55,300 ಮೆಟ್ರಿಕ್ ಟನ್‌ಗಳಿಗೆ ಕುಸಿದಿದೆ. ಈ ಪರಿಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಲ್ಲಿ ದೇಶ ರೇಷ್ಮೆ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನ ಪಡೆಯಲಿದ್ದು, ಆರ್ಥಿಕವಾಗಿ ತೊಂದರೆಯಲ್ಲಿರುವ ರೈತಾಪಿ ವರ್ಗಕ್ಕೆ ಸಹಕಾರಿಯಾಗಲಿದೆ ಹಾಗೂ ವಿದೇಶಿ ಅವಲಂಬನೆ ತಪ್ಪಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿಯಂತ್ರಣಕ್ಕೆ ಮನವಿ: ಸಿಲ್ಕ್ ಅಸೋಸಿಯೇಷನ್ ಆ್ ಇಂಡಿಯಾ ರೇಷ್ಮೆ ಸಚಿವ ನಾರಾಯಣಗೌಡ ಹಾಗೂ ರೇಷ್ಮೆ ಆಯುಕ್ತರಾದ ಸಿಂಧೂ ಬಿ ರೂಪೇಶ್ ಅವರ ಜತೆಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಗಂಟು ರೋಗ ಹಾವಳಿ ನಿಯಂತ್ರಿಸಲು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net