ರೇಷ್ಮೆ ಕೃಷಿ ಪ್ರವಾಸ ಆರಂಭ : ಸ್ವ-ಸಹಾಯ ಸಂದ ಮಹಿಳೆಯರೇ ಗೈಡ್​ಗಳು, ಆರ್ಥಿಕವಾಗಿ ಸದೃಢರನ್ನಾಗಿಸುವ ಪ್ರಯತ್ನ

2
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ರೇಷ್ಮೆ ನಗರಿ ಖ್ಯಾತಿಯನ್ನು ಉತ್ತುಂಗಕ್ಕೇರಿಸುವ ಮಹತ್ವದ ರೇಷ್ಮೆ ಕೃಷಿ ಪ್ರವಾಸ ಜಿಲ್ಲೆಯಲ್ಲಿ ಆರಂಭಗೊಂಡಿದ್ದು ಮೊದಲ ಪ್ರಯತ್ನದಲ್ಲೇ ಸ್ವ&ಸಹಾಯ ಸಂದ ಮಹಿಳೆಯರು ವಿದೇಶಿಗರನ್ನು ಸ್ವಾಗತಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದಲೂ ರೇಷ್ಮೆ ಕೃಷಿ ಪ್ರವಾಸ ಆರಂಭಿಸುವ ಸಂಬಂಧ ಚರ್ಚೆಗಳು ನಡೆಯುತ್ತಿದ್ದವು. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿತ್ತು. ಇದರ ನಡುವೆಯೇ ಜರ್ಮನ್​ ಪ್ರವಾಸಿಗರಿಗೆ ರೇಷ್ಮೆ ಕೃಷಿ ಪ್ರವಾಸದ ಆಸ್ವಾದ ಉಣಬಡಿಸಿ ಯಶಸ್ವಿಯಾಗಿದ್ದಾರೆ.

ಒಗ್ಗಟ್ಟಿನ ಪ್ರತಿಲ: ರೇಷ್ಮೆ ಪ್ರವಾಸ ಆರಂಭಿಸುವ ಜಿಲ್ಲಾ ಪಂಚಾಯಿತಿ ಕನಸಿಗೆ ಬೆಂಬಲವಾಗಿ ನಿಂತಿದ್ದು ಕೇರಳ ಮೂಲದ ಕಬಿನಿ ಟೂರಿಸಂ ಸಂಸ್ಥೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಸದಸ್ಯರಿಗೆ ರೇಷ್ಮೆ ಪ್ರವಾಸಕ್ಕೆ ಸಂಬಂದಿ-ಸಿದಂತೆ ಮೂರು ತಿಂಗಳು ತರಬೇತಿ ನೀಡಿತ್ತು. ತರಬೇತಿ ವೇಳೆ ಜಿಲ್ಲೆಯ ರೇಷ್ಮೆ ಬೆಳೆಯ ಸಮಗ್ರ ವಿವರಗಳ ಪರಿಚಯ, ಮಣ್ಣಿನಿಂದ ರೇಷ್ಮೆ ಬಟ್ಟೆವರೆಗಿನ ವ್ಯವಸ್ಥೆಗಳು, ಗ್ರಾಮೀಣರ ಜೀವನ ಶೈಲಿ, ಗ್ರಾಮೀಣ ಊಟದೊಂದಿಗೆ ಪ್ರವಾಸಿಗರನ್ನು ಸ್ವಾಗತಿಸುವುದು ಎಲ್ಲವನ್ನೂ ತಿಳಿಸಿಕೊಡಲಾಗಿತ್ತು. ಈ ಮೂಲಕ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಧೃಢರನ್ನಾಗಿರುವ ಪ್ರಯತ್ನ ಇತ್ತು.

ಜರ್ಮನ್ನರಿಗೆ ಸ್ವಾಗತ: ಕಬಿನಿ ಟೂರಿಸಂ ಸಂಸ್ಥೆಯ ಆಹ್ವಾನದ ಮೇರೆಗೆ 8 ಜರ್ಮನ್​ ಪ್ರವಾಸಿಗರು ಭಾನುವಾರ ಜಿಲ್ಲೆಗೆ ಭೇಟಿ ನೀಡಿದ್ದರು. ತರಬೇತಿ ಪಡೆದ ಮಹಿಳೆಯರೇ ಇವರನ್ನು ಸ್ವಾಗತಿಸಿದರು. ರಾಮನಗರ ತಾಲೂಕಿನ ಹಳ್ಳಿಗಳ ದರ್ಶನ ಮಾಡಿಸಿದ್ದಾರೆ. ಜಾತ್ರೆ ನಡೆಯುವ ಸ್ಥಳ, ದೇವಾಲಯ, ಅರಳಿಕಟ್ಟೆಗಳ ಬಳಿಕ ರೇಷ್ಮೆ ಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಹಿಪು$್ಪ ನೇರಳೆ ತೋಟ, ಚಾಕಿ ಸಾಕಣೆ ಕೇಂದ್ರ, ರೇಷ್ಮೆಗೂಡು ಕಟ್ಟುವ ಪ್ರಕ್ರಿಯೆ, ರೇಷ್ಮೆ ಮಾರುಕಟ್ಟೆ, ನೂಲು ಬಿಚ್ಚಾಣಿಕೆ ಕೇಂದ್ರಗಳು ಹೀಗೆ ಪ್ರತಿಯೊಂದರ ದರ್ಶನದ ಜತೆಗೆ ಮಾಹಿತಿಯನ್ನೂ ನೀಡಿದ್ದಾರೆ. ನಂತರ ರೇಷ್ಮೆ ಮಳಿಗೆಗಳಲ್ಲಿ ಖರೀದಿಗೂ ಅವಕಾಶ ನೀಡಿದ್ದಾರೆ. ಪ್ರವಾಸಿಗರಿಗೆ ಗೈಡ್​ಗಳ ರೀತಿ ಮಹಿಳೆಯರು ಕೆಲಸ ಮಾಡಿದ್ದಾರೆ. ಗ್ರಾಮೀಣ ಜೀವನ ಶೈಲಿ, ಹಳ್ಳಿ ಸೊಗಡಿನ ಅಡುಗೆಗಳನ್ನೇ ಪ್ರವಾಸಿಗರಿಗೆ ಉಣಬಿಡಿಸಿದ್ದಾರೆ.

ಹೇಗೆ ನಡೆದಿತ್ತು ತರಬೇತಿ: ಸಂಜೀವಿನಿ ಒಕ್ಕೂಟದ ಮೂಲಕ 30 ಮಹಿಳೆಯರಿಗೆ ಸಿಲ್ಕ್​ ಟೂರಿಸಂ ಬಗ್ಗೆ ಒಂದು ತಿಂಗಳ ತರಬೇತಿ ನೀಡಲಾಗಿತ್ತು. ಪ್ರವಾಸಿಗರನ್ನು ಸ್ವಾಗತಿಸುವುದರಿಂದ ಹಿಡಿದು, ಅವರನ್ನು ಕಾರು ಹತ್ತಿಸಿ, ಜಿಲ್ಲೆಯ ಗಡಿ ದಾಟಿಸುವವರೆಗೂ ನೀಡಬೇಕಿರುವ ಸೌಲಭ್ಯ, ನಡವಳಿಕೆಗಳ ಬಗ್ಗೆಯು ತರಬೇತಿಯಲ್ಲಿ ತಿಳಿಸಿಕೊಡಲಾಗಿತ್ತು. 30 ಮಂದಿಯ ಸಣ್ಣಸಣ್ಣ ಗುಂಪುಗಳನ್ನು ರಚಿಸಿ, ಪ್ರವಾಸೋದ್ಯಮಕ್ಕೆ ನೂತನ ಆಯಾಮ ನೀಡಿರುವುದು ವಿಶೇಷ.

ಭಾನುವಾರ ಜಿಲ್ಲೆಗೆ ಬಂದಿದ್ದ 8 ಜರ್ಮನ್​ ಪ್ರವಾಸಿಗರಿಗೆ ಸಂಜೀವಿನಿ ಒಕ್ಕೂಟದ ಮಹಿಳೆಯರೇ ಆತಿಥ್ಯ ನೀಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಪ್ರವಾಸ ಆರಂಭಗೊಂಡಿದ್ದು, ಜಿಲ್ಲೆಯ ಸಂಸತಿ ಪರಿಚಯಿಸುವ ಕೆಲಸ ನಡೆಯುತ್ತಿದೆ. ಇಕ್ರಂ, ಸಿಇಒ, ರಾಮನಗರ ಜಿಪಂ *** ಸಂಜೀವಿನಿ ಒಕ್ಕೂಟದ 30 ಮಹಿಳೆಯರಿಗೆ ಕಬಿನಿ ಟೂರಿಸಂ ಸಂಸ್ಥೆ ಮೂಲಕ ತರಬೇತಿ ನೀಡಲಾಗಿದ್ದು, ಪ್ರವಾಸಿಗರ ಸ್ವಾಗತದಿಂದ ಹಿಡಿದು ಎಲ್ಲ ಕೆಲಸವನ್ನು ಮಹಿಳೆಯರೇ ಮಾಡಲಿದ್ದಾರೆ. ಕೆಲವರು ಇಂಗ್ಲಿಷ್​ ಸಹ ಕಲಿತಿದ್ದು, ವಿದೇಶಿಗರೊಂದಿಗೆ ಸಂವಹನ ನಡೆಸುತ್ತಾರೆ. ವಿನೋದ್​, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ *** ಪ್ರವಾಸಿಗರಿಗೆ ಜಿಲ್ಲೆಯ ಮಾಹಿತಿ ಕೊಡುವುದೇ ಒಂದು ವಿಶಿಷ್ಟ ಅನುಭವ. ತರಬೇತಿ ಬಳಿಕ ನಾವು ಗೈಡ್​ಗಳಾಗಿದ್ದೇವೆ. ಕೆಲ ಗಿಡಮೂಲಿಕೆಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದೇವೆ. ಇದು ಹೆಮ್ಮೆಯ ವಿಷಯವಾಗಿದೆ. ಲೀಲಾವತಿ, ಮಹಿಳಾ ಗೈಡ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net