

ಮೈಸೂರು: ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಸ್ಥಾನ ಪಡೆದಕೊಂಡಿದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ತಿಳಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದಡಿ ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರೇಷ್ಮೆ ಕೃಷಿ ಹಾಗೂ ರೇಷ್ಮೆ ಉದ್ಯಮ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ರೇಷ್ಮೆ ಮಂಡಳಿಯ ಅಂಗ ಸಂಸ್ಥೆಯಾಗಿ 1963ರಲ್ಲಿ ಮೈಸೂರಿನಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಸ್ಥಾಪನೆ ಮಾಡಲಾಯಿತು. ಈ ಸಂಸ್ಥೆಯಿಂದ ರೇಷ್ಮೆಯ ಉತ್ಪಾದನೆಯಲ್ಲಿ ಕರ್ನಾಟಕವು ಮುಂಚೂಣಿಗೆ ಬರಲು ಸಾಧ್ಯವಾಗಿದೆ ಎಂದರು.
ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶಕ್ಕೆ ಭಾರತವೂ ಸಹ ತಕ್ಕ ಪೈಪೋಟಿ ನೀಡುತ್ತಿದೆ. ಆ ದೇಶದಿಂದ ರೇಷ್ಮೆ ಆಮದಿನ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ತಗ್ಗಿಸಲಾಗುತ್ತಿದೆ. ದೇಶದಲ್ಲೇ ರೇಷ್ಮೆ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಕೃಷಿ ಕ್ಷೇತ್ರವನ್ನು ಇತರ ರಾಜ್ಯಗಳಿಗೂ ವಿಸ್ತರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ರೇಷ್ಮೆ ಉದ್ಯಮದ ಸಮಗ್ರ ಪ್ರಗತಿಗೂ ಕ್ರಮ ತೆಗೆದುಕೊಳ್ಳಲಾಗಿದೆ. ರೇಷ್ಮೆ ಕೃಷಿ ಅಷ್ಟೇ ಅಲ್ಲದೇ ಔಷಧ, ಆಹಾರ ಹಾಗೂ ಸೌಂದರ್ಯ ವರ್ಧಕಗಳ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ ಎಂದರು.
ಭಾರತಕ್ಕೆ ಪೈಪೋಟಿ ನೀಡುತ್ತಿರುವ ಚೀನಾವು ರೇಷ್ಮೆ ಹಿಪ್ಪುನೇರಳೆ ಕೃಷಿಯಲ್ಲದೇ ಉದ್ಯಮಶೀಲತೆಯ ಪ್ರಯೋಗವನ್ನು 3 ದಶಕದ ಹಿಂದೆಯೇ ಮಾಡಿದೆ. ಆಗ ಈಗಿನಷ್ಟು ಮಾರುಕಟ್ಟೆ ಇರಲಿಲ್ಲ. ಸೌಂದರ್ಯವರ್ಧಕ ಉತ್ಪನ್ನಗಳಿಗೆ ಮಾರುಕಟ್ಟೆ ತೆರೆದುಕೊಂಡಿದೆ. ಅದಕ್ಕೆ ರೇಷ್ಮೆ ಸಮಗ್ರ ಯೋಜನೆಯಡಿ ಉತ್ತೇಜನ ಕೊಡಲಾಗುತ್ತಿದೆ ಎಂದರು.
7 ದೇಶಗಳ 22 ಪ್ರತಿನಿಧಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಇಥಿಯೋಪಿಯಾ, ಘಾನಾ, ಫಿಲಿಪ್ಪೀನ್ಸ್, ಉಗಾಂಡಾ, ಥೈಲ್ಯಾಂಡ್, ರೋಮೇನಿಯಾ ಹಾಗೂ ದಕ್ಷಿಣ ಸುಡಾನ್ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಎಸ್.ಮಂಥಿರಮೂರ್ತಿ, ಸಂಸ್ಥೆಯ ನಿರ್ದೇಶಕ ಡಾ.ಗಾಂಧಿದಾಸ್, ರೇಷ್ಮೆ ವಿಜ್ಞಾನಿಗಳಾದ ಡಾ.ಆರ್.ಮೀನಲ್, ಪದ್ಮನಾಭ ನಾಯಕ್ ಸೇರಿದಂತೆ ಇನ್ನಿತರರಿದ್ದರು