

ಕಲಬುರಗಿ: ಅವಿರೋಧವಾಗಿ ಸದಸ್ಯರು ಆಯ್ಕೆಯಾಗುವ ಗ್ರಾಪಂಗೆ 1 ಕೋಟಿ ರೂ. ವಿಶೇಷ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ನೀಡಲಾಗುವುದು ಎಂದು ಹೇಳಿಕೆ ನೀಡುವ ಮೂಲಕ ಅಧ್ಯಕ್ಷ ದತ್ತಾತ್ರೆಯ ಪಾಟೀಲ್ ರೇವೂರ ಚುನಾವಣೆ ನೀತಿ ಸಂಹಿತೆ ಉಲ್ಲಂಘಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಚುನಾವಣೆಯ ಹೊತ್ತಿನಲ್ಲಿ ಹೀಗೆ ಇಲ್ಲದ್ದನ್ನು ಘೋಷಣೆ ಮಾಡುವ ಮೂಲಕ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದಾರೆ. ರೇವೂರ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಜತೆಗೆ ಕಲಂ 171ರ ಪ್ರಕಾರ ಅಪರಾಧವಾಗಿದ್ದು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ದೂರಿನಲ್ಲಿ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿದ್ದಾರೆ.
ಮಂಡಳಿಗೆ ಬಿಡುಗಡೆಯಾಗುವ ಅನುದಾನ ಸದಸ್ಯರೊಂದಿಗೆ ಚಚರ್ಿಸಿ ಕೇವಲ ಅಭಿವೃದ್ದಿಗೆ ಮಾತ್ರ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಗ್ರಾಪಂ ಚುನಾವಣೆ ಘೋಷಣೆ ನಂತರ ನೀತಿ ಸಂಹಿತೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿ ದತ್ತಾತ್ರೇಯ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗುವ ಪಂಚಾಯಿತಿಗಳಿಗೆ ತಲಾ ರೂ 1 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಯಾವ ಆಧಾರದ ಮೇಲೆ ಘೋಷಣೆ ಮಾಡಿದ್ದಾರೆ ಎಂದು ಆಯೋಗಕ್ಕೆ ಪ್ರಶ್ನಿಸಿದ್ದಾರೆ.
ವ್ಯಕ್ತಿಯೊಬ್ಬ ತನ್ನ ಇಚ್ಛೆಯಂತೆ ಚುನಾವಣೆಗೆ ಸ್ಪಧರ್ಿಸುವುದು ಹಾಗೂ ಉಮೇದುವಾರಿಕೆ ವಾಪಸ್ ಪಡೆದುಕೊಳ್ಳುವುದು ಆತನ ಇಚ್ಛೆ. ನಾಮಪತ್ರ ಹಿಂಪಡೆಯಲು ಪ್ರಚೋದಿಸುವುದು ಮತ್ತು ಅವಿರೋಧವಾಗಿ ಆಯ್ಕೆಯಾಗುವ ಗ್ರಾಪಂಗೆ ಅನುದಾನ ಘೋಷಿಸುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಜಗದೇವ ಗುತ್ತೇದಾರ ತಿಳಿಸಿದ್ದಾರೆ.