

ಕಮಲಾಪುರ: ರೇವೂನಾಯಕ ಬೆಳಮಗಿ ಅವರಿಗೆ ಪಕ್ಷದ ಟಿಕೆಟ್ ನೀಡಿ, ಶಾಸಕ ಹಾಗೂ ಸಚಿವರನ್ನಾಗಿ ಮಾಡಿದ್ದೆ. ಆದರೆ ನಮ್ಮ ಉಪಕಾರವನ್ನು ಮರೆತು ದ್ರೋಹ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಸರಿಯಾದ ಪಾಠ ಕಲಿಸಬೇಕು. ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ರಾಂಪುರೆ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕ್ಷೇತ್ರದ ಬಿಜೆಪಿ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಅಲೆಯಿದೆ. ಮತ್ತೆ ಬಸವರಾಜ ಮತ್ತಿಮಡು ಅವರಿಗೆ ಜನರು ಭರ್ಜರಿ ಆಶೀರ್ವಾದ ಮಾಡಿ ಗೆಲ್ಲಿಸಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ದೇಶದೆಲ್ಲೆಡೆ ಅಧಿಕಾರ ಕಳೆದುಕೊಂಡು ತಬ್ಬಲಿಯಾಗಿರುವ ಕಾಂಗ್ರೆಸ್, ಕರ್ನಾಟಕದಲ್ಲೂ ಮೂಲೆಗುಂಪಾಗಲಿದೆ. ಹಿರಿಯ ರಾಜಕಾರಣಿಯಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುವಾಗ ನಾಲಗೆ ಮೇಲೆ ಹಿಡಿತವಿಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಈ ಹಿಂದೆ ರೇವೂನಾಯಕ್ ಅವರಿಗೆ ಎಂಪಿ ಟಿಕೆಟ್ ನೀಡಲಾಗಿದ್ದು, ಉz್ದೆÃಶಪೂರ್ವಕವಾಗಿ ಸೋತು ಪಕ್ಷಕ್ಕೆ ದ್ರೋಹ ಬಗೆದರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಮ್ಮೆದುರಿಗೆ ಬಂದಿದ್ದಾರೆ. ಅಧಿಕಾರಕ್ಕಾಗಿ ಎಷ್ಟು ಪಕ್ಷಗಳನ್ನು ಬದಲಿಸುತ್ತೀರಿ? ಜನರು ನಿಮಗೆ ಈಗ ಶಾಶ್ವತವಾಗಿ ಮನೆಗೆ ಕಳಿಸಲಿದ್ದಾರೆ ಎಂದರು.
ಶಾಸಕ ಬಸವರಾಜ ಮತ್ತಿಮಡು, ಜಾರ್ಖಂಡ್ ಶಾಸಕಿ ಡಾ.ನೀರಾ ಯಾದವ್, ಕಾಡಾ ಅಧ್ಯಕ್ಷ ಹರ್ಷವರ್ಧನ ಗುಗಳೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸ್ಸಪ್ಪ ಪಾಟೀಲ್ ಅಷ್ಟಗಿ, ಸಂಜು ದೋಶೆಟ್ಟಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಮಾಜಿ ಜಿಪಂ ಸದಸ್ಯ ಶಿವಶೆಟ್ಟಿ ಪಾಟೀಲ್ ಸೇರಿ ಇತರರು ಬಿಜೆಪಿ ಸೇರ್ಪಡೆಯಾದರು.
ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಪ್ರಮುಖರಾದ ಅಶೋಕ ಬಗಲಿ, ರಾಜಕುಮಾರ ಕೋಟೆ, ಸಂಗಮೇಶ ವಾಲಿ, ಅಣವೀರ ಇಂಗಿನಶೆಟ್ಟಿ, ನಾಮದೇವ ಕರಹರಿ, ಶಿವಕುಮಾರ ಪಸಾರ, ಸಿದ್ದಣಗೌಡ ಪಾಟೀಲ್, ರೇವಣಸಿದ್ದಪ್ಪ ಮೂಲಗೆ, ಜಯಶ್ರೀ ಮತ್ತಿಮಡು, ಎಸ್.ರಾಠೋಡ್, ಉದಯಕುಮಾರ ಪಾಟೀಲ್, ದೀಪಕ ಹೊಡಲ, ಶಿವಕುಮಾರ ದೊಶೆಟ್ಟಿ, ಸತೀಶ ಸೊರಡೆ, ಸತೀಶ ಪೂಜಾರಿ ಇತರರಿದ್ದರು. ಬಸವರಾಜ ಪಾಟೀಲ್ ಸ್ವಾಗತಿಸಿದರು. ಪ್ರವೀಣ ಮುಚ್ಚಟ್ಟಿ ನಿರೂಪಣೆ ಮಾಡಿದರು. ಜಗನ್ನಾಥ ಪಾಟೀಲ್ ವಂದಿಸಿದರು.