

ಭಾಲ್ಕಿ: ನಾವದಗಿ ಗ್ರಾಮದ ಸದ್ಗುರು ಶ್ರೀ ರೇವಪ್ಪಯ್ಯ ಮಹಾಶಿವಶರಣರ ೮೮ನೇ ಜಾತ್ರೋತ್ಸವ ನಿಮಿತ್ತ ವೈಭವದ ಪಲ್ಲಕ್ಕಿ ಉತ್ಸವ ನಡೆಯಿತು. ನಂತರ ಹಿರೇಮಠ ಸಂಸ್ಥಾನ ಹುಡಗಿಯ ಶ್ರೀ ವೀರಪಾಕ್ಷ ಶಿವಾಚಾರ್ಯರಿಂದ ಅಗ್ನಿಪೂಜೆ ನೆರವೇರಿತು.
ಪಲ್ಲಕ್ಕಿ ಉತ್ಸವ ಮೆರವಣಿಗೆ ಶ್ರೀ ರೇವಪ್ಪಯ್ಯ ಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ, ಗ್ರಾಮದ ಹೊರವಲಯದ ಅಗ್ನಿಕುಂಡಕ್ಕೆ ಸುತ್ತುವರೆದು ಮರಳಿ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯುದ್ದಕ್ಕೂ ವಿವಿಧ ಕಲಾ ತಂಡಗಳ ಪ್ರದರ್ಶನ, ಭಜನೆ, ರೇವಪ್ಪಯ್ಯನವರ ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿದರು. ಸುಮಂಗಲೆಯರು ಆರತಿ ತಟ್ಟೆಯೊಂದಿಗೆ ಪ್ರದರ್ಶನದಲ್ಲಿ ಪಾಲ್ಗೊಂಡರು. ಎಲ್ಲ ಕಾರ್ಯಕ್ರಮಗಳು ಹಿರೇಮಠ ಸಂಸ್ಥಾನ ಹುಡಗಿಯ ಶ್ರೀ ವೀರಪಾಕ್ಷ ಶಿವಾಚಾರ್ಯರು, ಕಟ್ಟಿಮನಿ ಹಿರೇಮಠ ಸಂಸ್ಥಾನ ಮೆಹಕರನ ಶ್ರೀ ರಾಜೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದವು. ದೇವಸ್ಥಾನವನ್ನು ಅಲಂಕೃತಗೊಳಿಸಿ, ಭಕ್ತಾದಿಗಳ ದರ್ಶನಕ್ಕೆ ಅಣಿ ಮಾಡಲಾಯಿತು.
ದೇವಸ್ಥಾನ ಸಂಸ್ಥೆಯ ಗೌರವಾಧ್ಯಕ್ಷ ರೇವಣಯ್ಯ ನಾಗಭೂಷಣ ಸ್ವಾಮಿ, ಅಧ್ಯಕ್ಷ ಪ್ರದೀಪ ಪಾಟೀಲಲ್, ಗ್ರಾಪಂ ಅಧ್ಯಕ್ಷ ರಾಜಶೇಖರ ಗೌಡಪ್ಪ ಬಿರಾದಾರ, ಮಲ್ಲಿಕಾರ್ಜುನ ಶೇರಿಕಾರ, ಶಿವರಾಜ ಬಿರಾದಾರ, ಪ್ರದೀಪ ಪಾಟೀಲ್, ಶಾಂತವೀರ ನಾಗಭೂಷಣ ಸ್ವಾಮಿ, ಸಿದ್ದಲಿಂಗ ಸ್ವಾಮಿ, ಹಾವಯ್ಯ ಸ್ವಾಮಿ, ಪ್ರಭು ನಾಗಭೂಷಣ ಸ್ವಾಮಿ, ರೇವಣಯ್ಯ ಸ್ವಾಮಿ ರಾಜೇಶ್ವರ ಇತರರಿದ್ದರು.