

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಸುತ್ತಮುತ್ತ ಬೆಟ್ಟ-ಗುಡ್ಡಗಳ ಸಾಲು, ಕಣ್ಮನ ತಣಿಸುವ ವನಸಿರಿ, ಸುಂದರ ಪ್ರಕೃತಿಯ ನಡುವೆ ಏಕಶಿಲಾ ಬೆಟ್ಟವಿರುವ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಅಪಾರ ಭಕ್ತರನ್ನು ಹೊಂದಿರುವ ಕ್ಷೇತ್ರವೇ ಅವ್ವೇರಹಳ್ಳಿ ಶ್ರೀ ರೇವಣಸಿದ್ದೇಶ್ವರ ಬೆಟ್ಟ.
ಬೆಟ್ಟವು ಅತ್ಯಂತ ಪ್ರಾಚೀನ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ಜಗದ್ಗುರು ರೇವಣಸಿದ್ದರು ಲೋಕಸಂಚಾರ ಮಾಡುತ್ತಾ ರಾಮನಗರ ತಾಲೂಕಿನ ಅವ್ವೇರಹಳ್ಳಿಯ ಬೆಟ್ಟದ ಸಾಲಿಗೆ ಬಂದು ಇಲ್ಲಿನ ಅತೀ ಎತ್ತರದ ಬೆಟ್ಟದಲ್ಲಿ ಗುಪ್ತವಾಗಿ 700 ವರ್ಷ ತಪೋನುಷ್ಠಾನ ಮಾಡಿ ಈ ಪ್ರದೇಶವನ್ನು ಪುನೀತಗೊಳಿಸಿದರು ಎಂಬುದು ಪ್ರತೀತಿ. ಅಂದಿನಿಂದ ಈ ಬೆಟ್ಟವು ರೇವಣಸಿದ್ದೇಶ್ವರ ಬೆಟ್ಟವೆಂದೇ ಹೆಸರಾಗಿದೆ. ಭಕ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಪವಿತ್ರ ಯಾತ್ರಾ ಸ್ಥಳವಾಗಿದೆ.
ಕ್ಷೇತ್ರದ ಪ್ರಮುಖ ದೇವಾಲಯಗಳು: ಬೆಟ್ಟದ ಮೇಲಿರುವ ರೇವಣಸಿದ್ದೇಶ್ವರರ ಉದ್ಭವ ಲಿಂಗ, ಬೆಟ್ಟದ ಕೆಳಭಾಗದಲ್ಲಿ ರೇಣುಕಾಂಬ ಅಮ್ಮನವರ ದೇವಾಲಯ, ಬಸವೇಶ್ವರ ದೇವಾಲಯ, ಬೆಟ್ಟದ ಮಧ್ಯಭಾಗದಲ್ಲಿ ವೀರಭದ್ರಸ್ವಾಮಿ ದೇವಾಲಯ, ಪಕ್ಕದಲ್ಲೇ ಭೀಮನಿಂದ ಪ್ರತಿಷ್ಠಾಪಿತವಾದ ಭೀಮೇಶ್ವರ ದೇವಾಲಯ, ಧರ್ಮರಾಯನಿಂದ ಪ್ರತಿಷ್ಠಾಪನೆಗೊಂಡ ಮರುಳ ಸಿದ್ದೇಶ್ವರ ದೇವಾಲಯಗಳನ್ನು ಕಾಣಬಹುದು. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ನಿತ್ಯದ ಪೂಜೆಗೆ ಭೀಮ ಭೀಮೇಶ್ವರ, ಧರ್ಮರಾಯ ಮರಳಿನಲ್ಲಿ ಮರುಳಸಿದ್ದೇಶ್ವರ ದೇವರನ್ನು ಪ್ರತಿಷ್ಠಾಪಿಸಿದರು ಎಂಬುದು ಪ್ರತೀತಿ. ಈಗಲೂ ಬೆಟ್ಟದ ಮಧ್ಯ ಭಾಗದಲ್ಲಿ ಈ ದೇವಾಲಯಗಳನ್ನು ಕಾಣಬಹುದಾಗಿದೆ. ಜತೆಗೆ ದೇವಾಲಯ ಇರುವ ಜಾಗವನ್ನು ಭೀಮೇಶ್ವರ ಸನ್ನಿಧಿ ಎನ್ನುತ್ತಾರೆ.
ಪ್ರಮುಖ ಮತ್ತು ವಿಶೇಷ ಸ್ಥಳ: ಬೆಟ್ಟದ ಕೆಳಭಾಗದಲ್ಲಿ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠ, ಮಠದ ಮುಂಭಾಗ ರೇಣುಕಾಚಾರ್ಯರ ಬೃಹತ್ ಮೂರ್ತಿ, ದಾಸೋಹ ಮಂದಿರ, ಸಮುದಾಯ ಭವನಗಳು, ಅತಿಥಿ ಗೃಹ, ಭೀಮೇಶ್ವರ ದೇವಾಲಯದ ಪಕ್ಕದಲ್ಲಿರುವ ಕಲ್ಯಾಣಿ, ಬೆಟ್ಟದ ಮೇಲಿರುವ ಎರಡು ಕಲ್ಯಾಣಿಗಳು, ಬೆಟ್ಟದ ತುದಿಯಲ್ಲಿರುವ ದೊಡ್ಡ ಗಂಟೆ, ಎರಡು ಶಿಖರಗಳು, ಬೆಟ್ಟದ ಪಕ್ಕದಲ್ಲೇ ಇರುವ ವಿಶಾಲ ಕೆರೆ ಕ್ಷೇತ್ರದ ಆಕರ್ಷಣೆ ಹೆಚ್ಚಿಸಿವೆ.
ರಥೋತ್ಸವ, ಲಕ್ಷ ದೀಪೋತ್ಸವ: ಕ್ಷೇತ್ರದಲ್ಲಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಬೆಟ್ಟದ ಮೆಲಿರುವ ಉದ್ಭವ ರೇವಣಸಿದ್ದೇಶ್ವರ ಮೂರ್ತಿಗೆ ರುದ್ರಾಭಿಷೇಕ ನಡೆಯುತ್ತದೆ. ಪ್ರತಿದಿನ ನೂರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ ಮೇ ತಿಂಗಳಿನಲ್ಲಿ ಬುದ್ಧ ಪೂರ್ಣಿಮೆಯಂದು ರಥೋತ್ಸವ ನಡೆಯುತ್ತದೆ. ಜಾತ್ರೆ ಪ್ರಯುಕ್ತ ಕ್ಷೇತ್ರದಲ್ಲಿರುವ ಬಸವೇಶ್ವರ ಸ್ವಾಮಿಗೆ ಅಗ್ನಿಕೊಂಡೋತ್ಸವ, ರೇಣುಕಾಂಬ ಅಮ್ಮನವರ ಮುತ್ತಿನ ಪಲ್ಲಕ್ಕಿ ಉತ್ಸವ, ನಾಟಕಗಳು ಸೇರಿ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಮೂರನೇ ದಿನಕ್ಕೆ ರೇಣುಕಾಂಬ ದೇವಿ ರಥೋತ್ಸವ ನಡೆಯುತ್ತದೆ ಅಲ್ಲದೆ ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ನಡೆಯುತ್ತದೆ.
ಕ್ಷೇತ್ರದ ಮಹಿಮೆ: ದೆವ್ವ, ಭೂತ ಹಿಡಿದವರು ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರೆ ಅವುಗಳ ಕಾಟದಿಂದ ಮುಕ್ತಿ ಸಿಗುತ್ತದೆ ಎಂಬುದು ನಂಬಿಕೆ. ಹಾಗೆಯೇ ದೆವ್ವದ ಹೆಸರಿನಲ್ಲಿ ಕಲ್ಲಿನ ಮೇಲೆ ಬರೆಸಿದರೆ ದೆವ್ವಗಳು ಕಾಡುವುದಿಲ್ಲ. ಈಗಲೂ ಈ ಸೇವೆ ನಡೆಯುತ್ತಿದೆ. ಇದಕ್ಕೆ ಇಲ್ಲಿರುವ ಸಾವಿರಾರು ಕಲ್ಲುಗಳೇ ಸಾಕ್ಷಿಯಾಗಿವೆ. ಬೆಟ್ಟದ ಮೇಲಿರುವ ಉದ್ಭವ ಲಿಂಗ ರೇವಣ ಸಿದ್ದೇಶ್ವರನ ದರ್ಶನ ವಾಡಿ ಪಕ್ಕದಲ್ಲೇ ಇರುವ ಕಲ್ಯಾಣಿ ಸಮೀಪದ ಬಸವನನ್ನು ಪೂಜಿಸಿದರೆ ಸಂತಾನ ಪ್ರಾಪ್ತಿ, ಕಷ್ಟಗಳು ದೂರಾಗುತ್ತವೆ ಎಂಬುದು ನಂಬಿಕೆ.
ಗ್ರಾಮದೇವರ ಹಬ್ಬ: ರಾಮನಗರ, ಮಂಡ್ಯ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾವಾಂತರ ಜಿಲ್ಲೆಗಳ ಗ್ರಾಮಗಳಲ್ಲಿ ಊರಹಬ್ಬಕ್ಕೂ ಮುನ್ನ ಗ್ರಾಮದೇವತೆಗಳನ್ನು ಕ್ಷೇತ್ರಕ್ಕೆ ತಂದು ಪೂಜೆ ಮಾಡಿಸಿಕೊಂಡು ಹೋಗುವ ಸಂಪ್ರದಾಯ ಅನೇಕ ವರ್ಷಗಳಿಂದ ನಡೆದು ಇದ್ದು, ಈಗಲೂ ಪ್ರಚಲಿತದಲ್ಲಿದೆ.
ಬಸ್‌ವಾರ್ಗ: ರೇವಣಸಿದ್ದೇಶ್ವರ ಬೆಟ್ಟ ರಾಜಧಾನಿ ಬೆಂಗಳೂರಿನಿಂದ 65 ಕಿ.ಮೀ. ಮೈಸೂರಿನಿಂದ 95 ಕಿ.ಮೀ. ರಾಮನಗರದಿಂದ 13 ಕಿ.ಮೀ. ಕನಕಪುರದಿಂದ 18 ಕಿ.ಮೀ. ಚನ್ನಪಟ್ಟಣದಿಂದ 15 ಕಿ.ಮೀ. ವಾಗಡಿಯಿಂದ 42 ಕಿ.ಮೀ. ತುಮಕೂರಿನಿಂದ 83 ಕಿ.ಮೀ. ದೂರ, ರಾಮನಗರ- ಕನಕಪುರ ರಸ್ತೆ ಅವ್ವೇರಹಳ್ಳಿ ಗೇಟ್‌ನಿಂದ 2 ಕಿ.ಮೀ. ದೂರದಲ್ಲಿದೆ.
ದಾಸೋಹ ವ್ಯವಸ್ಥೆ: ಪ್ರತಿದಿನ ಬೆಟ್ಟಕ್ಕೆ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಇರಲಿದೆ. ಬೆಟ್ಟದ ತುದಿಯವರೆಗೂ ನೆರಳಿನ ವ್ಯವಸ್ಥೆ ವಾಡಿದ್ದಾರೆ. ಅಲ್ಲದೆ ಕಡಿದಾಗಿರುವ ಬೆಟ್ಟ ಹತ್ತಲು ಮೆಟ್ಟಿಲುಗಳಿದ್ದು ಎರಡೂ ಕಡೆ ಕಬ್ಬಿಣದ ರಾಡ್ ಅಳವಡಿಸಲಾಗಿದೆ.
ಕ್ಷೇತ್ರಕ್ಕೆ ಬರುವ ಭಕ್ತರಿಗೆ ತೊಂದರೆ ಆಗದಂತೆ ನೀರು, ವಸತಿ ಸೇರಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ರಾಮನಗರ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಹಿರಿಯ ಅಧಿಕಾರಿಗಳ ವಾರ್ಗದರ್ಶನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್.ಜೆ. ಯೇಸುರಾಜ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ರೇವಣಸಿದ್ದೇಶ್ವರ ಬೆಟ್ಟ ಕ್ಷೇತ್ರದಲ್ಲಿ ಪ್ರಾಚೀನ ದೇವಾಲಯಗಳಿದ್ದು ದಕ್ಷಿಣ ಕಾಶಿ ಎಂದೇ ಹೆಸರಾಗಿದೆ. ಪ್ರತಿದಿನ ಬೆಟ್ಟದ ಮೇಲಿನ ರೇವಣಸಿದ್ದೇಶ್ವರ ಉದ್ಭವ ಮೂರ್ತಿಗೆ ರುದ್ರಾಭಿಷೇಕ ನಡೆಯುತ್ತದೆ. ಕ್ಷೇತ್ರಕ್ಕೆ ಬಂದು ದೇವರ ದರ್ಶನ ವಾಡಿದರೆ ಕಷ್ಟ ಕಾರ್ಪಣ್ಯಗಳು ಅಂತ್ಯವಾಗುತ್ತವೆ, ಜತೆಗೆ ದೆವ್ವ, ಭೂತ ಚೇಷ್ಟೆ ದೂರವಾಗುತ್ತದೆ ಎಂಬುದು ಕ್ಷೇತ್ರದ ಮಹಿಮೆ. ವಿಜಯಕುವಾರ್, ಪ್ರಧಾನ ಅರ್ಚಕ, ರೇವಣಸಿದ್ದೇಶ್ವರ ದೇವಾಲಯ