

ವಿಜಯವಾಣಿ ಸುದ್ದಿಜಾಲ ಗದಗ
ಹಾಲುಣಿಸುವ ತಾಯಂದಿರು ಒಂದು ವರ್ಷದೊಳಗಿನ ಮಕ್ಕಳು ಮತ್ತು ವಯಸ್ಕರು ಪ್ರಾಣಿಗಳು ಕಡಿದಾಗ ರೇಬಿಸ್ ಲಸಿಕೆಯನ್ನು ಹಾಕಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು. ಸಾಕು ಪ್ರಾಣಿಗಳಿಗೂ ತಪ್ಪದೇ ಪ್ರತಿ ವರ್ಷ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ಹಾಗೂ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸೊಳ್ಳೆಗಳಿಂದ ಹರಡಬಹುದಾದ ರೋಗಗಳಾದ ಡೆಂಘೆ, ಮಲೇರಿಯಾ, ಚಿಕೂನ್ಗುನ್ಯಾ ಹಾಗೂ ಮಿದುಳ ಜ್ವರದ ಪ್ರಕರಣಗಳನ್ನು ತಡೆಗಟ್ಟಲು ಗುಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ಎಲ್ಲ ಕುಡಿಯುವ ನೀರಿನ ಮೂಲಗಳಿಂದ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಕಂಡುಬಂದಲ್ಲಿ ಕ್ಲೋರಿನೇಷನ್ಗೆ ಕ್ರಮ ವಹಿಸಬೇಕು’ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ ನುಚ್ಚಿನ ಮಾತನಾಡಿ, ನಾಯಿ, ಬೆಕ್ಕು ಅಥವಾ ಇತರೆ ಪ್ರಾಣಿಗಳು ಕಚ್ಚಿದಾಗ ನಿರ್ಲಕ್ಷ್ಯ ವಹಿಸದೇ ತಕ್ಷಣವೇ ಸಾಬೂನಿನಿಂದ ಚೆನ್ನಾಗಿ ತೊಳೆದುಕೊಂಡು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ರೇಬಿಸ್ ಸೋಂಕು ಹೊಂದಿದ ಪ್ರಾಣಿಗಳಲ್ಲಿ ನಾಯಿಗಳಿಂದ ಶೇ. 97, ಬೆಕ್ಕುಗಳಿಂದ ಶೇ. 2 ಹಾಗೂ ಇತರೆ ಪ್ರಾಣಿಗಳಿಂದ ಶೇ. 1 ರೋಗ ಹರಡುವ ಸಾಧ್ಯತೆ ಇರುತ್ತದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಔಷಧ ಲಭ್ಯವಿರುವಂತೆ ಕ್ರಮ ವಹಿಸಲಾಗಿದೆ ಎಂದರು.
ರೇಬಿಸ್ ಕುರಿತು ಜಾಗೃತಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸುಶೀಲಾ, ಡಾ. ಬಿ.ಎಂ. ಗೊಜನೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಿ.ಎಸ್.ಪಲ್ಲೇದ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ವೈ.ಕೆ. ಭಜಂತ್ರಿ, ಡಾ. ಅರುಂಧತಿ ಕೆ. ಇತರರು ಇದ್ದರು.