

ಕೂಡ್ಲಿಗಿ: ಜಗದ್ಗುರು ರೇಣುಕಾಚಾರ್ಯರು ನಾಡಿಗೆ ಸೌಹಾರ್ದ ಹಾಗೂ ಸಹಬಾಳ್ವೆಯ ಮಹತ್ವ ಸಾರಿದ್ದಾರೆ ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಹೇಳಿದರು.
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಜಗದ್ಗುರು ರೇಣುಕಾಚಾರ್ಯ ವೃತ್ತ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಜಗದ್ಗುರು ರೇಣುಕಾಚಾರ್ಯರು ದಕ್ಷಿಣ ಭಾರತದ್ಯಾಂತ ಲಕ್ಷಾಂತರ ಭಕ್ತ ಸಮೂಹ ಹೊಂದಿದ್ದು, ವೀರಶೈವ ಧರ್ಮಕ್ಕೆ ಕೊಡುಗೆ ನೀಡಿದ್ದಾರೆ. ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದರು.
ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಎಚ್.ಎಂ.ಗಂಗಾಧರ ಸ್ವಾಮಿ ಮಾತನಾಡಿ, ವೀರಶೈವ ಧರ್ಮ ಸಂಸ್ಥಾಪಕ ಜಗದ್ಗುರು ರೇಣುಕಾಚಾರ್ಯರು ದೇಶದ್ಯಾಂತ ಸಂಚರಿಸಿ ಧರ್ಮ ಬೋಧನೆ ಮಾಡುವ ಮೂಲಕ ಮಾನವ ಧರ್ಮವನ್ನು ಜಾಗೃತಗೊಳಿಸಿದರು. ಇಡೀ ವಿಶ್ವಕ್ಕೆ ಶಾಂತಿ ಬೋಧನೆ ಮಾಡುವ ಮೂಲಕ ಮಾನವ ಧರ್ಮಕ್ಕೆ ಭದ್ರ ಬುನಾದಿ ಹಾಕಿದರು ಎಂದು ತಿಳಿಸಿದರು.
ವೀರಶೈವ ಧರ್ಮದ ಜತೆ ಎಲ್ಲ ಧರ್ಮಗಳಿಗೂ ಸಮಾನ ಗೌರವ ಹಾಗೂ ಸಹಬಾಳ್ವೆ ನಡೆಸುವಂತೆ ಬೋಧಿಸಿದರು. ನಮ್ಮ ಧರ್ಮದ ಜತೆ ಅನ್ಯ ಧರ್ಮೀಯರಿಗೂ ಗೌರವ ನೀಡಿ ಸಹಬಾಳ್ವೆ ನಡೆಸಲು ಮೇಲ್ಪಂಕ್ತಿ ಹಾಕಿದರು. ಜಗದ್ಗುರು ರೇಣುಕಾಚಾರ್ಯರ ಆದರ್ಶಗಳನ್ನು ಪಾಲಿಸಿ ಸೌಹಾರ್ದ ಕಾಪಾಡಬೇಕೆಂದು ಎಚ್.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಪ್ರಮುಖರಾದ ಟಿ.ಜಿ.ಮಲ್ಲಿಕಾರ್ಜುನ ಗೌಡ, ಎ.ಎಂ.ವಾಗೀಶ್ ಮೂರ್ತಿ, ತುಪ್ಪಳ್ಳಿ ಮೂಗಣ್ಣ, ಕೆ.ಎಚ್.ಎಂ.ವಿವೇಕ್, ಸಾಸಲವಾಡ ವೀರಭದ್ರಯ್ಯ, ಬಿ.ಎಂ.ಗುರು, ಎಳನೀರು ಮಂಜಣ್ಣ, ಹಿ.ಮ.ಚಿದಾನಂದ ಸ್ವಾಮಿ ಇದ್ದರು.