

ಹುಮನಾಬಾದ್: ದೀಪಾವಳಿ ಹಬ್ಬ ನಿಮಿತ್ತ ಮೂರು ದಿನಗಳ ಕಾಲ ಪರಂಪರೆ ಅನುಸಾರ ಸ್ಥಳೀಯ ಹಿರೇಮಠದ ಶ್ರೀಗಳಿಂದ ಭಕ್ತರ ಮನೆಮನೆಗೆ ತೆರಳಿ ಕಂತಿ ಭಿಕ್ಷೆ ಸ್ವೀಕರಿಸುವ ಮೂಲಕ ಸಂಭ್ರಮ ಹಾಗೂ ಭಕ್ತಿಯಿಂದ ದೀಪಾವಳಿ ಆಚರಿಸಲಾಯಿತು.
ಗುರುವಾರದಿಂದ ಮೂರು ದಿನಗಳ ಕಾಲ ಪ್ರತಿನಿತ್ಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ಥಳೀಯ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು ಪಟ್ಟಣದ ವಿವಿಧ ಬಡಾವಣೆಯಲ್ಲಿನ ಭಕ್ತರ ನಿವಾಸಗಳಿಗೆ ತೆರಳಿ ಕಂತಿ ಭಿಕ್ಷೆ ಬೇಡಿಕೊಳ್ಳುವ ಮೂಲಕ ಭಕ್ತರಿಗೆ ದೇವರು ಶಾಂತಿ, ಸಮೃದಿ ನೀಡಲಿ ಎಂದು ಶುಭ ಹಾರೈಸಿ, ಸದಾ ಭಕ್ತಿಯ ಮಾರ್ಗದಲ್ಲಿ ನಡೆಯಿರಿ, ದುಶ್ಚಟ, ದುರ್ಗುಣಗಳನ್ನು ಜೋಳಿಗೆಗೆ ಹಾಕಿ ಎಂದು ಹೇಳಿದರು.
ದೀಪಾವಳಿ ಹಬ್ಬ ಸಮಸ್ತ ನಾಡಿನ ಜನರಿಗೆ ಒಳಿತು ಮಾಡಲೆಂದು ಹಿಂದಿನಿಂದಲೂ ಶ್ರೀಮಠದ ಸಂಪ್ರದಾಯದಂತೆ ಮೂರು ದಿನಗಳ ಕಾಲ ಭಕ್ತರ ಮನೆಯಲ್ಲಿ ಕಂತಿ ಭಿಕ್ಷೆ ಬೇಡಲಾಗುವುದು ಎಂದು ತಿಳಿಸಿದರು.