

ಚಿತ್ರದುರ್ಗ: ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾದ ರೇಣುಕಸ್ವಾಮಿ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಕೋಟಿ ರೂ. ಪರಿಹಾರ, ಪತ್ನಿಗೆ ಸರ್ಕಾರಿ ಹುದ್ದೆ ನೀಡಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯಿಸಿದರು.
ರೇಣುಕಸ್ವಾಮಿ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ನಟ ದರ್ಶನ್ ಗ್ಯಾಂಗ್‌ನಿಂದ ಹೀನಾಯವಾಗಿ ರೇಣುಕಸ್ವಾಮಿ ಕೊಲೆಯಾಗಿದೆ. ಇಡೀ ಕುಟುಂಬ ಶೋಕದಲ್ಲಿದೆ. ಆದರೆ, ಇಷ್ಟಾದರೂ ರಾಜ್ಯ ಸರ್ಕಾರದ ಯಾವ ಪ್ರತಿನಿಧಿ ಮೃತನ ಕುಟುಂಬದವರಿಗೆ ಸೌಜನ್ಯಕ್ಕಾದರೂ ಕನಿಷ್ಟ ಫೋನ್ ಕರೆ ಮಾಡಿಲ್ಲ. ಇದನ್ನು ನೋಡಿದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂಬ ಅನುಮಾನ ಮೂಡುತ್ತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರಹಿಂಸೆ ವೇಳೆ ಆ ಜೀವ ಎಷ್ಟು ನೊಂದಿರಬಹುದು. ವಿವಾಹವಾಗಿ ವರ್ಷವೂ ತುಂಬಿಲ್ಲ. 26 ವರ್ಷದ ಪತ್ನಿ ಸಹನಾ 3 ತಿಂಗಳ ಗರ್ಭಿಣಿ. ಅವರ ಮುಂದಿನ ಜೀವನದ ಗತಿಯೇನು? ಕೂಡಲೇ ರಾಜ್ಯ ಸರ್ಕಾರ ಸರ್ಕಾರಿ ಹುದ್ದೆ ನೀಡಬೇಕು. ಇಲ್ಲದಿದ್ದರೆ, ಸದನದಲ್ಲೇ ಪ್ರಶ್ನಿಸಲಾಗುವುದು ಎಂದರು.
ನಟ ದರ್ಶನ್ ಹೀರೋ ಎನ್ನುವುದಕ್ಕಿಂದ ಜೀರೋ ಎಂದೇ ಕರೆಯಬೇಕು. ಮೃತನ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು. ಇದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ತಡೆಯುವಲ್ಲಿ ಸರ್ಕಾರ ಮುಂದಾಗದೆ, ವಿಫಲವಾಗಿದೆ ಎಂದು ಕಿಡಿಕಾರಿದರು.