ರೆಸಾರ್ಟ್ ದುರಂತ: ಮೈಸೂರಿನಲ್ಲಿ ಮೂವರು ಯುವತಿಯರ ಅಂತ್ಯಕ್ರಿಯೆ

mysore
Published on

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಮೂವರು ಇಂಜಿನಿಯರಿಂಗ್ ಯುವತಿಯರ ಅಂತ್ಯಕ್ರಿಯೆ ಸೋಮವಾರ ನಗರದಲ್ಲಿ ನಡೆಯಿತು.

ನಗರದ ಜಿಎಸ್‌ಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ 5ನೇ ಸೆಮಿಸ್ಟರ್ ವಿದ್ಯಾರ್ಥಿಯರಾದ ಎನ್.ಕೀರ್ತನಾ, ಎಂ.ಡಿ.ನಿಶಿತಾ, ಎಸ್.ಪಾರ್ವತಿ ಪ್ರವಾಸಕ್ಕೆ ತೆರಳಿದಾಗ ಭಾನುವಾರ ಬೆಳಗ್ಗೆ 10ರ ಸುಮಾರಿಗೆ ಮೃತಪಟ್ಟಿದ್ದರು.

ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು, ಮೃತರ ಕುಟುಂಬದವರಿಗೆ ಶವವನ್ನು ಹಸ್ತಾಂತರಿಸಿದರು. ಬಳಿಕ 11ಗಂಟೆಗೆ ಶವಗಳನ್ನು ಮೈಸೂರಿಗೆ ತಂದ ಕುಟುಂಬದವರು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಿದ್ದರು.

ಪಾರ್ವತಿ ಅವರ ಪ್ರಾರ್ಥಿವ ಶರೀರವನ್ನು ಅಗ್ರಹಾರ ಬಳಿಯ ಮನೆ ಬಳಿ ಕುಟುಂಬದವರು ತಂದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ ಚಾಮುಂಡಿಬೆಟ್ಟದ ರುದ್ರಭೂಮಿಯಲ್ಲಿ ಪಾರ್ವತಿ ಅಂತ್ಯಸಂಸ್ಕಾರ ನಡೆಯಿತು.

ಎಂ.ಡಿ.ನಿಶ್ಚಿತಾ ಅವರ ಶವವನ್ನು ಕುರುಬಾರಹಳ್ಳಿಯಲ್ಲಿರುವ ಮನೆಗೆ ತಂದ ಕುಟುಂಬದವರು ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಜೆ.ಸಿ.ಬಡಾವಣೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದರು. ಎನ್.ಕಿರ್ತನಾ ಅವರ ಶವವನ್ನು ಹೆಬ್ಬಾಳಿಗೆ ತಂದು ಬಳಿಕ ಬನ್ನಿಮಂಟಪದ ಜೋಡಿ ತೆಂಗಿನ ಮರದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಒಂದೇ ಆಂಬುಲೆನ್ಸ್‌ನಲ್ಲಿ ಬಂದ ಮೂವರ ಶವ:

ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಸೋಮವಾರ ಬೆಳಗ್ಗೆ 5 ಗಂಟೆಗೆ ಯುವತಿಯರ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು. ಮಹಜರು ನಡೆಸಿ ಮಂಗಳೂರು ಪೊಲೀಸರು ಮೃತದೇಹಗಳನ್ನು ಮೈಸೂರಿಗೆ ತರುವ ಆಂಬುಲೆನ್ಸ್‌ನ ಸಂಪೂರ್ಣ ವೆಚ್ಚವನ್ನು ಭರಿಸಿದರು. ಮೂವರು ಯುವತಿಯರ ಶವವನ್ನು ಒಂದೇ ಆಂಬುಲೆನ್ಸ್‌ನಲ್ಲಿ ನಗರಕ್ಕೆ ತರಲಾಯಿತು ಎಂದು ಮೃತರ ಪಾಲಕರು ತಿಳಿಸಿದರು.

ಉನ್ನತ ಹುದ್ದೆ ಕನಸು ಕಂಡಿದ್ದ ನಿಶಿತಾ:

‘ನಿಶಿತಾ ಹೊರದೇಶಕ್ಕೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿಕೊಂಡು ಉನ್ನತ ಹುದ್ದೆಗೇರಿ ಉತ್ತಮ ಬದುಕು ನಡೆಸುವ ಕನಸು ಕಂಡಿದ್ದಳು’ ಎಂದು ಆಕೆಯ ತಂದೆ ಮಲ್ಲೇಶ್ ರೋದಿಸುತ್ತ ಹೇಳುತ್ತಿದ್ದದ್ದು ನೆರೆದವರ ಮನಕಲುಕಿತು.

‘ಮುಂದಿನ ವರ್ಷದಿಂದ ನೀನು ಕೆಲಸಕ್ಕೆ ಹೋಗಬೇಡ. ನಾನೇ ನೋಡಿಕೊಳ್ಳುತ್ತೇನೆ. ನೀನು ಕೂತುಕೊಂಡು ಊಟ ಮಾಡು’ ಎಂದು ಧೈರ್ಯ ತುಂಬುತ್ತಿದ್ದ ಪುತ್ರಿ ಈಗ ನನ್ನನ್ನು ಪರ್ಮೆಂಟ್ ಆಗಿ ದುಡಿಯುವಂತೆ ಮಾಡಿದ್ದಾಳೆ ಎಂದು ಹೇಳುತ್ತ ಕಣ್ಣೀರು ಹಾಕಿದರು.

ಇಂಜಿನಿಯರಿಂಗ್ ಮುಗಿಸಿ 2 ವರ್ಷ ಕೆಲಸ ಮಾಡಿ ನಂತರ ಸ್ನಾತಕೋತ್ತರ ಪದವಿ ಮುಗಿಸಿ ಐಎಎಸ್ ಮಾಡಬೇಕೆಂದು ಕನಸು ಕಂಡಿದ್ದಳು. ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸಕ್ಕೆ ಸೇರಿ ಆರ್.ಟಿ.ನಗರದ ಅವರ ಖಾಲಿ ನಿವೇಶನದಲ್ಲಿ ಮನೆ ಕಟ್ಟಿಸುವೆ ಎಂದು ಭರವಸೆಯನ್ನೂ ನೀಡಿದ್ದಳು ಎಂದು ಸಂಬಂಧಿಕರು ಹೇಳುತ್ತ ಭಾವುಕರಾದರು.

ಇಬ್ಬರು ಸ್ನೇಹಿತರನ್ನು ಕಾಪಾಡಲು ಹೋಗಿ ನನ್ನ ಮಗಳೂ ಹೋದಳು, ಮೂವರು ನೀರಿನಲ್ಲಿ ಮುಳುಗಿ ಕುಟುಂಬದವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. ರೆಸಾರ್ಟ್‌ನ ಈಜುಕೊಳದಲ್ಲಿ ಸರಿಯಾದ ಸುರಕ್ಷತೆ ಇಲ್ಲದಿದ್ದರಿಂದ ಈ ದುರಂತ ಸಂಭವಿಸಿದೆ.

ಶ್ರೀನಿವಾಸ್ ಮೃತ ಪಾರ್ವತಿ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net