ರೆವಿನ್ಯೊ ಕೋರ್ಟ್‌ನಲ್ಲಿ ಶೇ.98ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ ಹಾಸನ ಸಾಧನೆ

ರೆವಿನ್ಯೊ ಕೋರ್ಟ್‌ನಲ್ಲಿ ಶೇ.98ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ ಹಾಸನ ಸಾಧನೆ
Published on

ಹಾಸನ: ಹಾಸನ ಜಿಲ್ಲೆಯ ಡಿಸಿ ಕೋರ್ಟ್, ಉಪ-ವಿಭಾಗಾಧಿಕಾರಿ ಕೋರ್ಟ್ ಕಳೆದ ಒಂದು ವರ್ಷದಲ್ಲಿ ತಕರಾರು ಅರ್ಜಿ ವಿಲೇವಾರಿಯಲ್ಲಿ ಜಿಲ್ಲೆ ಶೇ.95ಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಿದೆ. ಹಾಗೆಯೇ ಕಂದಾಯ ಇಲಾಖೆಗೆ ಸಂಬಂಧಿಸಿದ ಭೂ ಪರಿವರ್ತನೆ, ಸಕಾಲ ಹಾಗೂ ಭೂಮಿ ರ‌್ಯಾಂಕಿಂಗ್‌ನಲ್ಲೂ ಹಾಸನ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.ಕಳೆದ 9 ತಿಂಗಳಿನಲ್ಲಿ ಭೂಮಿ ರ‌್ಯಾಂಕಿಂಗ್‌ನಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಕಳೆದ 7 ತಿಂಗಳಲ್ಲಿ ಭೂ ಪರಿವರ್ತನೆಯಲ್ಲಿ (ಲ್ಯಾಂಡ್ ಕನ್‌ವರ್ಷನ್)ನಲ್ಲಿ ಪ್ರಥಮ ಸ್ಥಾನ, ಫಾರ್ಮ್ 1 ಟು 5 ಪ್ರಗತಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಾಗೂ ಸಕಾಲ ಪ್ರಗತಿಯಲ್ಲಿ ನೇ ಸ್ಥಾನ, ಅಟಲ್ ಜಿ ಜನಸ್ನೇಹಿ ಕೇಂದ್ರ 5ನೇ ಸ್ಥಾನ ಪಡೆದುಕೊಂಡಿದೆ.

ಡಿಸಿ ಕೋರ್ಟ್‌ನಲ್ಲಿ 1122 ಪ್ರಕರಣಗಳಲ್ಲಿ 956 ಪ್ರಕರಣಗಳು ಇತ್ಯರ್ಥಗೊಂಡಿವೆ. ಎಡಿಸಿ ಲಾಗಿನ್‌ನಲ್ಲಿ 105 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 28 ಪ್ರಕರಣಗಳ ಮುಗಿದಿವೆ. ಹಾಸನ ಉಪ-ವಿಭಾಗಾಧಿಕಾರಿ ಕೋರ್ಟ್‌ನಲ್ಲಿ 1701 ಪ್ರಕರಣಗಳಲ್ಲಿ 1489 ಪ್ರಕರಣಗಳು ಹಾಗೆಯೇ ಸಕಲೇಶಪುರ ಉಪ-ವಿಭಾಗಾಧಿಕಾರಿ ಕೋರ್ಟ್‌ನಲ್ಲಿ 1209 ಪ್ರಕರಣಗಳಲ್ಲಿ 1106 ಪ್ರಕರಣಗಳು ಇತ್ಯರ್ಥಗೊಂಡಿವೆ.

2452 ವಿವಾದ ಪ್ರಕರಣಗಳಲ್ಲಿ 2323 ಪ್ರಕರಣಗಳು ಇತ್ಯರ್ಥಗೊಂಡಿವೆ. ಮೊಜಿನಿಯಲ್ಲಿ ತಪ್ಪಾದ 11296 ಆರ್‌ಟಿಸಿಯಲ್ಲಿ 8562 ಆರ್‌ಟಿಸಿಗಳನ್ನು ಸರಿಪಡಿಸಲಾಗಿದೆ. ಕಾಲಂ 3/9 ರಲ್ಲಿ 2846 ಆರ್‌ಟಿಸಿಯಲ್ಲಿ 1649 ಆರ್‌ಟಿಸಿಗಳನ್ನು ಸರಿಪಡಿಸಲಾಗಿದೆ. ಪಿವೈಕೆ ಐ 1332 ಆರ್‌ಟಿಸಿಗಳಲ್ಲಿ 1280 ಪಿವೈಕೆ ಐ ಆರ್‌ಟಿಸಿ ನವೀಕರಿಸಲಾಗಿದೆ.

ಜಿಲ್ಲಾಧಿಕಾರಿ ಪರಿಶ್ರಮ

ಹಾಸನ ಜಿಲ್ಲೆಯ ಕಂದಾಯ ಇಲಾಖೆಯ ಈ ಪ್ರಗತಿಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರ ಕೊಡುಗೆ ಅಪಾರವಾಗಿದೆ. ನಿರಂತರವಾಗಿ ವಿಎ, ಆರ್‌ಐ ಹಂತದಿಂದ ತಹಸೀಲ್ದಾರ್‌ವರೆಗೂ ಸಭೆ ನಡೆಸಿ ನಿಗದಿತ ಗುರಿ ನೀಡಿ ಅದರ ಪ್ರಗತಿಯನ್ನು ನಿಗದಿತವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ರಾತ್ರಿವರೆಗೂ ಸಹ ಹಲವು ಬಾರಿ ಸಭೆ ನಡೆಸಿದ ಉದಾಹರಣೆಗಳಿವೆ. ಕಳೆದ ಒಂದು ವರ್ಷಗಳಲ್ಲಿ ಅವರು ಮಾಡಿದ ಕೆಲಸದ ಪರಿಣಾಮವಾಗಿ ಕಂದಾಯ ಇಲಾಖೆಯಲ್ಲಿ ಇಂದು ಈ ಸಾಧನೆ ಸಾಧ್ಯವಾಗಿದೆ.

ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ

ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿರುವ ಕಂದಾಯ ಅಧಿಕಾರಿಗಳ ಶ್ರೇಷ್ಠ ಸೇವೆಯನ್ನು ಗುರುತಿಸಿ ಕಂದಾಯ ಆಯುಕ್ತಾಲಯ ವತಿಯಿಂದ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರಿಗೆ ಸೆ.27ರಂದು ನೀಡಿತ್ತು. ಹಾಗೆಯೇ ವಿವಿಧ ವಿಭಾಗಗಳಲ್ಲಿ ಉಪವಿಭಾಗಾಧಿಕಾರಿ ಜೆ.ಬಿ. ಮಾರುತಿ, ಅರಸೀಕೆರೆ ತಹಸೀಲ್ದಾರ್ ಎಂ.ಜಿ. ಸಂತೋಷಕುಮಾರ್, ಅರಕಲಗೂಡು ತಹಸೀಲ್ದಾರ್ ಬಸವರೆಡ್ಡೆಪ್ಪ ರೋಣದ, ಹಾಸನ ತಹಸೀಲ್ದಾರ್ ಶ್ವೇತಾ ಎಂ ರವೀಂದ್ರ, ಹೊಳೆನರಸೀಪುರ ತಹಸೀಲ್ದಾರ್ ಕೆ.ಕೆ ಕೃಷ್ಣಮೂರ್ತಿ, ಬೇಲೂರು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿ ಜಿ. ಮೋಹನ್ ಕುಮಾರ್ ಅವರನ್ನು ಕಂದಾಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಂದಾಯ ಅದಾಲತ್

ಆಯಾ ತಾಲೂಕುವಾರು ಆಯಾ ತಹಸೀಲ್ದಾರ್‌ಗಳು ಹಾಗೂ ಜನಪ್ರತಿನಿಧಿಗಳು ನಡೆಸುತ್ತಿರುವಂತಹ ಕಂದಾಯ ಅದಾಲತ್ ಕೂಡ ಇಲಾಖೆಯ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಸಣ್ಣಪುಟ್ಟ ವಿಚಾರಗಳಿಗೆ, ಜಮೀನಿಗೆ ಹೋಗುವ ದಾರಿ ಸಮಸ್ಯೆ ಸಂಬಂಧವೇ ಸಾಕಷ್ಟು ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತಿವೆ. ಇಂತಹ ನೂರಾರು ಪ್ರಕರಣಗಳನ್ನು ಮಾತುಕತೆ ಮೂಲಕವೇ ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನಗಳು ಕಂದಾಯ ಅದಾಲತ್‌ನಲ್ಲಿ ನಡೆದಿವೆ.

ಏನಿದು ಆರ್‌ಸಿಸಿಎಂಎಸ್?

ಕಂದಾಯ ನ್ಯಾಯಾಲಯ ಪ್ರಕರಣ ಮಾನಿಟರಿಂಗ್ ವ್ಯವಸ್ಥೆ (ಆರ್‌ಸಿಸಿಎಂಎಸ್) ಎನ್ನುವುದು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ದಾಖಲಾದ ಎಲ್ಲ ನ್ಯಾಯಾಲಯದ ಪ್ರಕರಣಗಳ ಮೇಲ್ವಿಚಾರಣೆಗಾಗಿ ಇರುವ ವೆಬ್ ಅಪ್ಲಿಕೇಶನ್ ಆಗಿದೆ. ಅಂದರೆ, ಎಲ್ಲ ವಿಚಾರಣೆಗಳನ್ನು ದಾಖಲಿಸಲು ಮತ್ತು ಪ್ರತಿಯೊಂದು ಪ್ರಕರಣದ ಇತಿಹಾಸವನ್ನು ಸಂರಕ್ಷಿಸಲು, ವಿವಾದ ಸಮೀಕ್ಷೆ ಸಂಖ್ಯೆಗಳು ಮತ್ತು ತೀರ್ಪುಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ಹಾಸನ ಜಿಲ್ಲೆ ಕಂದಾಯ ಇಲಾಖೆ ಎಲ್ಲ ಹಂತದಲ್ಲೂ ಪ್ರಥಮ ಸ್ಥಾನದಲ್ಲಿದೆ. ಹಾಸನ ಉಪ ವಿಭಾಗಾಧಿಕಾರಿ ಕೋರ್ಟ್‌ನಲ್ಲಿ 1701 ಪ್ರಕರಣಗಳಲ್ಲಿ 1489 ಪ್ರಕರಣಗಳು (ಅಕ್ಟೋಬರ್) ಇತ್ಯರ್ಥವಾಗಿವೆ. ಕಳೆದ ಜುಲೈನಿಂದ ಈವರೆಗೂ 3,112 ಪ್ರಕರಣಗಳು ಇತರ್ಥವಾಗಿವೆ. ಪ್ರತಿ ವಾರ ಏನಿಲ್ಲವಾದರೂ 70ರಿಂದ 80 ಪ್ರಕರಣಗಳು ದಾಖಲಾಗುತ್ತವೆ. ಅವುಗಳನ್ನು ಶೀಘ್ರವೇ ಪರಿಶೀಲಿಸಿ ಇತ್ಯರ್ಥ ಮಾಡಲಾಗುತ್ತಿವೆ.

- ಜೆ.ಬಿ. ಮಾರುತಿ ಉಪ ವಿಭಾಗಾಧಿಕಾರಿ, ಹಾಸನ

ನಾನು ಹಲವು ಹಳ್ಳಿಗಳಿಗೆ ಭೇಟಿ ನೀಡಿದಾಗ ಕಂದಾಯ ಇಲಾಖೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ರೈತರು, ಸಾರ್ವಜನಿಕರು ಮನವಿ ಮಾಡುತ್ತಾರೆ. ಹಾಗಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ದೃಷ್ಟಿಯಿಂದ ತಾಲೂಕಿನ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಕಂದಾಯ ಅದಾಲತ್ ಹಮ್ಮಿಕೊಂಡಿದ್ದೇನೆ. ಅನೇಕ ವರ್ಷಗಳಿಂದ ಬಗೆಹರಿಸಲಾಗದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇನೆ.

- ಎಚ್.ಕೆ. ಸುರೇಶ್, ಶಾಸಕರು, ಬೇಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net