

ಹುಬ್ಬಳ್ಳಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಾರೆಂಬ ವಿಶ್ವಾಸ ನನಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಅವರು ವಿಧಾನಸಭೆ ಚುನಾವಣೆಯಲ್ಲಿ ಹೊಸ ಪಕ್ಷ ಕಟ್ಟುತ್ತೇವೆಂದು ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಸಾರ್ವಜನಿಕ ಬದುಕಿನಲ್ಲಿ ಬರುತ್ತೇನೆ ಎಂದು ಹೇಳಿದ್ದಾರೆ ಎಂದರು.
ಬಿಜೆಪಿಯವರು ನನಗೆ ಸೂಕ್ತ ಸ್ಥಾನ- ಮಾನ, ಗೌರವ ಕೊಟ್ಟಿದ್ದಾರೆ. ರೆಡ್ಡಿ ಅವರು ಡಿ. 25 ರಂದು ಏನೇ ನಿರ್ಧಾರ ಕೈಗೊಂಡರೂ ನನ್ನ ಮತ್ತು ಅವರ ಸ್ನೇಹ ಶಾಶ್ವತವಾಗಿ ಇರಲಿದೆ. ರೆಡ್ಡಿ ಅವರೊಂದಿಗೆ ಮುಖ್ಯಮಂತ್ರಿಯವರು ಮಾತನಾಡಿದ್ದಾರೆ. ನಾನು ಸಹ ಮಾತನಾಡಿದ್ದೇನೆ. ಸ್ನೇಹ ಹಾಗೂ ಪಕ್ಷ ಬಿಡಲಾಗದ ಸಂದರ್ಭದಲ್ಲಿ ಬಿಜೆಪಿ ನಾಯಕರು ಪರಿಹಾರ ಸೂಚಿಸುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದರು.