

ಬಳ್ಳಾರಿ : ಬೆಂಗಳೂರಿನಲ್ಲಿ ರೆಡ್ಡಿ ಜನ ಸಂಘದಿಂದ ರೆಡ್ಡಿ ವಿಶ್ವ ವಿದ್ಯಾಲಯ ಸ್ಥಾಪಿಸುವ ಉದ್ದೇಶವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಬಲಿಜಭವನದಲ್ಲಿ ಬಳ್ಳಾರಿ ಜಿಲ್ಲಾ ರೆಡ್ಡಿ ನೌಕರರ ಸಂಘದ ವತಿಯಿಂದ ಬುಧವಾರ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗು ನಿವೃತ್ತ ರೆಡ್ಡಿ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೆಡ್ಡಿ ಜನ ಸಂಘ ಸ್ಥಾಪನೆಯಾಗಿ ನೂರು ವರ್ಷಗಳ ಕಳೆಯುತ್ತಿದೆ. ಆದರೆ, ಇಲ್ಲಿಯವರೆಗೆ ಸಂಘದಲ್ಲಿ ಐಕ್ಯತೆಯಿಂದ ಚುನಾವಣೆ ನಡೆದಿಲ್ಲ. ಸಂಘದಿಂದ ವೈದ್ಯಕೀಯ, ದಂತವೈದ್ಯಕೀಯ ಬಿಟ್ಟು ಎಲ್ಲ ರೀತಿಯ ಶಿಕ್ಷಣ ಬೆಂಗಳೂರಿನಲ್ಲಿ ದೊರೆಯುತ್ತಿದೆ. ಹತ್ತು ಸಾವಿರಕ್ಕಿಂತಲೂ ಹೆಚ್ಚು ನಮ್ಮ ಮತ್ತು ಇತರೆ ಸಮುದಾಯದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದ್ದರಿಂದ ಸಮುದಾಯದ ಒಂದು ವಿಶ್ವ ವಿದ್ಯಾಲಯ ಸ್ಥಾಪಿಸುವ ಚಿಂತನೆ ನಡೆದಿದೆ. ಸಮಾಜವನ್ನು ಕರ್ನಾಟಕ ಮಟ್ಟದಲ್ಲಿ ಒಂದಡೆ ಸೇರುವ ಕಾರ್ಯ ಪೂರ್ಣಗೊಂಡಿದೆ. ಈಗ ಭಾರತದಲ್ಲಿನ ರೆಡ್ಡಿ ಸಮುದಾಯವನ್ನು ಒಂದಡೆ ಸೇರಿಸುವ ಉದ್ದೇಶದಿಂದ ರಾಷ್ಟ್ರ ಮಟ್ಟದ ರೆಡ್ಡಿ ಸಮಾವೇಶವನ್ನು ಈ ವರ್ಷ ನಡೆಯಲಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರೆಡ್ಡಿ ಸಮುದಾಯದ ಹಿರಿಯರಾಗಿದ್ದು ಅವರಿಗೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಪದವಿ ದೊರೆಯಲಿ ಎಂದು ಆಶಿಸಿದರು. ನಮ್ಮಲ್ಲಿ ಐಕ್ಯತೆಯ ಕೊರತೆ ಇದೆ. ಅದು ನೀಗಬೇಕು, ಹಲವು ಕಾರಣಗಳಿಂದ ಜನಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲರೂ ಸೌಹಾರ್ದದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು.
ಹರಿಹರ ತಾಲೂಕಿನ ಎರೆಹೊಸಹಳ್ಳಿಯ ಮಹಾಯೋಗಿ ವೇಮನ ಸಂಸ್ಥಾನ ಮಠದ ರೆಡ್ಡಿ ಗುರು ಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿದರು.
ಬಳಿಕ ಎಸ್‌ಎಸ್‌ಎಲ್‌ಸಿ ಹಾಗು ದ್ವಿತೀಯ ಪಿಯುಸಿಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ಆರವತ್ತುಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗು ನಿವೃತ್ತ ರೆಡ್ಡಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಮುಖರಾದ ಕರ್ನಾಟಕ ರಾಜ್ಯ ರೆಡ್ಡಿ ಜನ ಸಂಘದ ನಿರ್ದೇಶಕರಾದ ಎಂ.ಸಿ.ಪ್ರಭಾಕರ ರೆಡ್ಡಿ , ಗಣಪಾಲ ಐನಾಥ ರೆಡ್ಡಿ, ರೆಡ್ಡಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ ರೆಡ್ಡಿ, ಗಾಲಿ ಅರುಣಾ ಲಕ್ಷ್ಮಿ ಇದ್ದರು.