ರೆಡ್ಡಿ ಜನಸಂಘದಿಂದ ವೃತ್ತಿ ಮಾರ್ಗದರ್ಶನ ಕೇಂದ್ರ ಪ್ರಾರಂಭ

CTD 25 REDDI JANASAGA--002
Published on

ಚಿತ್ರದುರ್ಗ: ಏಕಾಗ್ರತೆಯಿಂದ ವಿದ್ಯಾರ್ಥಿಗಳು ಅಧ್ಯಯನದೆಡೆ ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ರೆಡ್ಡಿ ಜನಸಂಘದ ಅಧ್ಯಕ್ಷ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಸಂಘದಿಂದ ಸೋಮವಾರ ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮುದಾಯ ಹಾಗೂ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಘದಿಂದ ಚಿತ್ರದುರ್ಗದಲ್ಲಿ ವೃತ್ತಿಮಾರ್ಗದರ್ಶನ ಕೇಂದ್ರ ಪ್ರಾರಂಭಿಸಲಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ತಿಂಗಳ ಅವಧಿಯ ಕೋಚಿಂಗ್ ಕ್ಲಾಸ್‌ಗಳನ್ನು ಪ್ರತಿ ವರ್ಷ ನಡೆಸಲಾಗುವುದು ಎಂದರು.
1921ರಿಂದ ಆರಂಭವಾಗಿರುವ ಸಂಘಕ್ಕೆ ಹಣ ಕೊರತೆಯಿಲ್ಲ, ಸಾಕಷ್ಟು ಠೇವಣಿ ಇದೆ. ಸಂಘಕ್ಕೆ ಬರುವಂಥ ಹಣ ಸಮುದಾಯ, ಸಮಾಜಕ್ಕೆ ಸದ್ಬಳಕೆಯಾಗಬೇಕು. ಈ ವರ್ಷದಿಂದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುವಂಥ ನಗದು ಮೊತ್ತವನ್ನು ಹೆಚ್ಚಿಸಲಾಗಿದ್ದು, ಈ ವರ್ಷ ಅಂದಾಜು 45 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ಎನ್.ಕೃಷ್ಣಪ್ರಸಾದ್ ಮಾತನಾಡಿ, ಕಠಿಣ ಶ್ರಮವಿಲ್ಲದೆ ಯಾವುದೇ ಯಶ ಸ್ಸು ದೊರೆಯದು. ಯಶಸ್ಸಿಗೆ ಯಾವುದೇ ಮಂತ್ರದಂಡವಿಲ್ಲ. ಅದು ಸುಲಭವಾಗಿ ಲಭಿಸದು. ಶ್ರಮ ಮತ್ತು ಯಶಸ್ಸು ಒಂದೇ ನಾಣ್ಯದ ಎ ರಡು ಮುಖಗಳಿದ್ದಂತೆ ಎಂದರು.
ಇಂಜಿನಿಯರ್, ಮೆಡಿಕಲ್ ಎನ್ನದೆ ಹೊಸ ಕೋರ್ಸ್‌ಗಳಿಗೂ ಪ್ರವೇಶ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು. ಸಾಧನೆ ದಾರಿ ಸ್ಪಷ್ಟವಿರಬೇಕು, ಗುರಿ ಸಾಧಿಸುವ ಛಲವಿರಬೇಕು. ಆತ್ಮವಿಶ್ವಾಸ, ಬದ್ಧತೆ, ಪ್ರಯತ್ನ, ನಂಬಿಕೆಯೊಂದಿಗೆ ಗುರಿ ತಲುಪಬೇಕು. ನಿಮ್ಮ ಭವಿಷ್ಯ, ನಿಮ್ಮ ಕೈಯಲ್ಲೇ ಇದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಪದ್ಧತಿ ಹೆಚ್ಚಾಗಬೇಕು. ಈ ಮೂಲಕ ಅವರಲ್ಲಿ ಓದುವ ಹವ್ಯಾಸವನ್ನು ರೂಢಿಸುವಂತೆ ಪಾಲಕರಿಗೆ ಸಲಹೆ ನೀಡಿದರು.
ಡಿಡಿಪಿಐ ಕೆ.ರವಿಶಂಕರರೆಡ್ಡಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಪ್ರಶಸ್ತಿ ಫಲಕದೊಂದಿಗೆ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಂಗವಿಕಲರ ಷಟಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಅಂತಾರಾಷ್ಟ್ರೀಯ ಕ್ರೀಡಾಪಟು ಚಳ್ಳಕೆರೆ ತಾಲೂಕು ಕಾಲುವೆಹಳ್ಳಿಯ ಪಲ್ಲವಿ, ಎನ್ನೆಸ್ಸೆಸ್‌ನಲ್ಲಿ ಉತ್ತಮ ಸಾಧನೆಯೊಂದಿಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವ ರಕ್ಷಿತಾ, ನಿವೃತ್ತ ಭೂವಿಜ್ಞಾನಿ, ಸಂಘದ ಕಾರ‌್ಯದರ್ಶಿ ಜೆ.ಪರಶುರಾಮ, ಡಿಡಿಪಿಐ ಕೆ.ರವಿಶಂಕರ ರೆಡ್ಡಿ, ಕೃಷ್ಣಪ್ರಸಾದ್, ತಿಪ್ಪಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಮಾನ್ಯಾ, ಜಿ.ಪಿ.ಸ್ಪಂದನಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಘದ ಉಪಾಧ್ಯಕ್ಷ ಎಂ.ಕೆ.ಅನಂತರೆಡ್ಡಿ, ಕಾರ‌್ಯದರ್ಶಿ ಜಿ.ಟಿ.ವಿಶ್ವನಾಥ್, ಖಜಾಂಚಿ ಡಿ.ಕೆ.ಶೀಲಾ, ಡಾ.ಸಿದ್ದಾರ್ಥ ಗುಂಡಾರ್ಫಿ, ತಾಪಂ ಮಾಜಿ ಅಧ್ಯಕ್ಷ ವೇಣುಗೋಪಾಲ್, ಸುರೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net