ರೆಡ್ ಎಫ್​ಎಂನಿಂದ ‘ನಾನು ನಮ್ಮ ಅಪ್ಪ’ ಅಭಿಯಾನ

red
Published on

ಹುಬ್ಬಳ್ಳಿ: ವಿಶ್ವ ಯೋಗ ದಿನದಂದೇ ಅಪ್ಪಂದಿರ ದಿನವೂ ಬಂದ ಹಿನ್ನೆಲೆಯಲ್ಲಿ ರಾಜ್ಯದ ಅತಿದೊಡ್ಡ ರೇಡಿಯೋ ನೆಟ್​ವರ್ಕ್ 93.5 ರೆಡ್ ಎಫ್​ಎಂ ವತಿಯಿಂದ ವಿಶೇಷ ಅಭಿಯಾನ ‘ನಾನು ನಮ್ಮ ಅಪ್ಪ’ ಆಯೋಜಿಸುವ ಮೂಲಕ ಗಮನ ಸೆಳೆಯಿತು.

ಅಪ್ಪಂದಿರ ದಿನವನ್ನು ಆರೋಗ್ಯಕರವಾಗಿ ಆಚರಿಸಲು ರೆಡ್ ಎಫ್​ಎಂನ ಸೋಷಿಯಲ್ ಮೀಡಿಯಾ ವೇದಿಕೆ ಒದಗಿಸಿತು. ಕುಟುಂಬದ ಆಧಾರ ಸ್ತಂಭವಾದ ಅಪ್ಪನ ಆರೋಗ್ಯವೂ ಅಷ್ಟೇ ಮುಖ್ಯ ಎನ್ನುವುದನ್ನು ತಿಳಿಸಿಕೊಟ್ಟು ಸಾಮಾಜಿಕ ಕಾಳಜಿ ಮೆರೆಯಲಾಯಿತು.

ಕುಟುಂಬದ ಹಿತಕ್ಕಾಗಿ ಯಜಮಾನ ಇಡೀ ಜೀವನವನ್ನೇ ಸವೆಸುತ್ತಾನೆ. ಅದರ ಮಧ್ಯೆ ತನ್ನ ಆರೋಗ್ಯ ಮರೆತುಬಿಡುತ್ತಾನೆ. ಹಾಗಾಗಿ ತಂದೆಗೆ ಆತನ ಆರೋಗ್ಯ ಎಷ್ಟು ಮಹತ್ವದ್ದು ಎನ್ನುವುದನ್ನು ತಿಳಿಸಿಕೊಡಲು ಈ ಅಭಿಯಾನ ನೆರವಾಯಿತು.

ರೆಡ್ ಎಫ್​ಎಂನ ಕೇಳುಗರು ಹಾಗೂ ಅಭಿಮಾನಿಗಳಿಗೆ ತಮ್ಮ ಆತ್ಮೀಯ ತಂದೆಯೊಂದಿಗೆ ಯೋಗ ಮಾಡುವ ವಿಡಿಯೋ ಕಳುಹಿಸಿಕೊಡಲು ಕೇಳಲಾಗಿತ್ತು. ಜೂನ್ 13ರಿಂದ 21ರ ವರೆಗೆ ನಡೆದ ಈ ಅಭಿಯಾನದಲ್ಲಿ ಹಲವರು ಪಾಲ್ಗೊಂಡರು.

ಅಪ್ಪಂದಿರ ಹಾಗೂ ಯೋಗ ದಿನ ಒಂದೇ ದಿನ ಬಂದಿರುವುದನ್ನು ಬಳಸಿಕೊಂಡ ರೆಡ್ ಎಫ್​ಎಂ, ತಂದೆಯ ಆರೋಗ್ಯ ಕುಟುಂಬಕ್ಕೆ ಎಷ್ಟು ಮುಖ್ಯ ಎಂದು ತಿಳಿಸಿಕೊಡಲು ನಡೆಸಿದ ಭಾವನಾತ್ಮಕ ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿತು ಎಂದು ರೆಡ್ ಎಫ್​ಎಂನ ಸಿಒಒ ಹಾಗೂ ನಿರ್ದೇಶಕ ಬಿ. ಸುರೇಂದರ್ ಹರ್ಷ ವ್ಯಕ್ತಪಡಿಸಿದ್ದಾರೆ.

ರೆಡ್ ಎಫ್​ಎಂ ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರ್ಗಿ ಸ್ಟೇಷನ್​ಗಳ ಮೂಲಕ ಈ ಅಭಿಯಾನ ನಡೆಯಿತು. ಇದನ್ನು ಪೋಸ್ಟ್ ಮಾಡಿದ ರೆಡ್​ಎಫ್​ಎಂನ ಕನ್ನಡ ಡಿಜಿಟಲ್ ಪೇಜ್​ಗೆ ಉತ್ತಮ ಸ್ಪಂದನೆ ಲಭ್ಯವಾಯಿತು.

ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅಚಿಂತ್ಯಾ ಕೂಡ ತನ್ನ ಸಹೋದರಿ ಹಾಗೂ ತಂದೆಯೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿದೆ. ಯೋಗಪಟು 13 ವರ್ಷದ ಖುಷಿ ತನ್ನ ತಂದೆಯೊಂದಿಗೆ ಭಾಗವಹಿಸಿದ್ದರು.

ಹೀಗೆ ಬಂದ ವಿಡಿಯೋಗಳನ್ನು ರೆಡ್ ಎಫ್​ಎಂ ಕನ್ನಡ ಫೇಸ್​ಬುಕ್ ಪೇಜ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ನಂಬರ್ ಒನ್ ಕನ್ನಡ ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿಗಳ ಮಾಧ್ಯಮ ಸಹಭಾಗಿತ್ವ ಇತ್ತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net