ರೂಂ ಸಿಗದೆ ವಾಹನಗಳಲ್ಲೆ ಮಲಗಿದ ಜನ

kls traffic
ಕಳಸದ ಮುಖ್ಯರಸ್ತೆಯಲ್ಲಿ ಪ್ರವಾಸಿಗರ ವಾಹನಗಳಿಂದ ಟ್ರಾಫಿಕ್ ಜಾಮ್ ಆಗಿರುವುದು.
Published on

ಕಳಸ: ಪ್ರವಾಸಿಗರಿಂದ ಕಳಸ ತಾಲೂಕು ತುಂಬಿದ್ದು, ಭಾನುವಾರ ಎಲ್ಲೆಡೆ ಜನದಟ್ಟಣೆ ಉಂಟಾಗಿತ್ತು. ಎರಡನೇ ಶನಿವಾರ, ಭಾನುವಾರ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇದರಿಂದ ಇಲ್ಲಿನ ಬಹುತೇಕ ರೆಸಾರ್ಟ್, ಹೋಟೆಲುಗಳು, ಹೋಂಸ್ಟೇಗಳು ಭರ್ತಿಯಾಗಿವೆ.

ಪಟ್ಟಣಕ್ಕೆ ಬರುವ ಬಹುತೇಕ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯುಲ್ಲಿ ಪ್ರವಾಸಿಗರ ವಾಹನಗಳು ಸಂಚರಿಸಿವೆ. ಕೆಲವೆಡೆ ವಾಹನ ದಟ್ಟಣೆ ಉಂಟಾಗಿತ್ತು. ಕಳಸ ಮುಖ್ಯ ರಸ್ತೆಯ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದು ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದ ಸ್ಥಳೀಯರು ಕಿರಿ ಕಿರಿ ಅನುಭವಿಸಿದರು. ಆಗಾಗ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಹರಸಹಾಸ ಪಡುತ್ತಿದ್ದರು. ಇಲ್ಲಿಯ ಪ್ರಮುಖ ತೂಗುಸೇತುವೆಗಳಲ್ಲಿ ಉಂಟಾದ ಜನ ದಟ್ಟಣೆಯಿಂದ ಸ್ಥಳೀಯರು ಊರುಗಳಿಗೆ ತೆರಳಲು ತೊಂದರೆ ಅನುಭವಿಸಿದರು. ಅಲ್ಲದೆ ಅಪಾಯಕಾರಿ ತೂಗುಸೇತುವೆಗಳಲ್ಲಿ ಪ್ರವಾಸಿಗರು ಕುಣಿದು, ಸೆಲ್ಫಿ ತೆಗೆಯುತ್ತಿದ್ದುದು ಕಂಡುಬಂತು.

ತಾಲೂಕಿನ ಪ್ರವಾಸಿತಾಣಗಳಾದ ಕುದುರೆಮುಖ ಶಿಖರ, ನೇತ್ರಾವತಿ ಶಿಖರ, ಮೈದಾಡಿ, ಕ್ಯಾತನಮಕ್ಕಿ, ವಶಿಷ್ಠಾಶ್ರಮ, ಅಂಭಾತೀರ್ಥ, ಸುರುಮನೆ ಜಲಪಾತ, ಕುರುಂಜಲ್ ಗುಡ್ಡ, ಧಾರ್ಮಿಕ ಕ್ಷೇತ್ರಗಳಾದ ಹೊರನಾಡು, ಕಳಸ ಕ್ಷೇತ್ರಗಳು ಪ್ರವಾಸಿಗರಿಂದ ತುಂಬಿಕೊಂಡಿವೆ.

ಶನಿವಾರದ ರಾತ್ರಿ ಕೆಲ ಪ್ರವಾಸಿಗರಿಗೆ ಹೋಟೆಲುಗಳಲ್ಲಿ ಊಟ ಸಿಗದೆ, ಉಳಿಯಲು ರೂಂ ಸಿಗದೆ ವಾಹನಗಳಲ್ಲಿ ಮಲಗಿ ದಿನ ದೂಡಿದರು. ಬಹುತೇಕ ಪ್ರವಾಸಿ ತಾಣಗಳಿಗೆ ಹೋಗುವ ರಸ್ತೆಗಳು ಶಿಥಿಲಗೊಂಡ ಹಿನ್ನ್ನೆಲೆಯಲ್ಲಿ ಪ್ರವಾಸಿಗರು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net