

ಚಿತ್ರದುರ್ಗ: ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘವು 2022-23ನೇ ಸಾಲಿನವರೆಗೂ 90.81 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥಪ್ಪ ತಿಳಿಸಿದರು.
ಹೊರವಲಯದ ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ 2022-23ನೇ ಸಾಲಿನ 74ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
2023ರ ಮಾರ್ಚ್ ಅಂತ್ಯಕ್ಕೆ 1,903 ರೈತ ಮತ್ತು 33 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರಿದ್ದಾರೆ. 37 ಕೋಟಿ ರೂ. ವಹಿವಾಟು ನಡೆಸಿದ್ದು, 21.45 ಕೋಟಿ ರೂ. ಷೇರು ಬಂಡವಾಳ ಹೊಂದಿದೆ ಎಂದರು.
ಆರ್‌ಎಂಸಿ ರಸ್ತೆಯಲ್ಲಿ ಸ್ವಂತ ಕಟ್ಟಡ, 2 ಉಗ್ರಾಣ, ಪ್ರಧಾನ ಕಚೇರಿಗೆ ಹೊಂದಿಕೊಂಡಂತೆ 2 ಉಗ್ರಾಣ, ಎಪಿಎಂಸಿ ಆವರಣದ ‘ಸಿ’ ಬ್ಲಾಕ್‌ನಲ್ಲಿ 8 ಗೋದಾಮು ನಿರ್ಮಿಸಿದ್ದು, ಎಲ್ಲವನ್ನೂ ಉಪಯೋಗಿಸಲಾಗುತ್ತಿದೆ ಎಂದು ಹೇಳಿದರು.
ಸಂಘದ ‘ಎ’, ‘ಬಿ’ ದರ್ಜೆಯ ಸದಸ್ಯರಿಗೆ ಪ್ರತಿ ವರ್ಷ ಶೇ.25ರಂತೆ ಡಿವಿಡೆಂಟ್ ಪಾವತಿಸಲು ತೀರ್ಮಾನಿಸಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.85 ಅಂಕಗಳಿಸಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರಿಗೆ ರಸಗೊಬ್ಬರ, ಬಿತ್ತನೆ ಬೀಜ ಖಾಸಗಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜು.18ರ ವರೆಗೆ 3.95 ಕೋಟಿ ರೂ. ಮೊತ್ತದ ಕೃಷಿ ಸಲಕರಣೆ ನೀಡಲಾಗಿದೆ. ಸಂಘ ಪ್ರತಿ ವರ್ಷ ಅಂದಾಜು 70 ಲಕ್ಷ ರೂ. ನಿಂದ 90 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ರೈತ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನಷ್ಟು ಸೌಲಭ್ಯ ಒದಗಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ಎ.ಎಂ.ಆನಂದಪ್ಪ, ನಿರ್ದೇಶಕರಾದ ಎಚ್.ಎನ್.ಹನುಮಂತಪ್ಪ, ಎ.ಈಶ್ವರಪ್ಪ, ಸಿ.ಕುಬೇರಪ್ಪ, ಜಿ.ಆರ್.ಧನಂಜಯ್, ವಿ.ವಿಶ್ವನಾಥಪ್ಪ, ಎನ್.ಕಲ್ಲೇಶ್, ಎನ್.ಎಚ್.ಮಂಜುನಾಥ್, ವೈ.ಪ್ರಕಾಶ್, ಎಸ್.ಎಚ್.ತಿಪ್ಪೇಸ್ವಾಮಿ, ಬಿ.ಲೋಲಾಕ್ಷಮ್ಮ, ಜಿ.ಎಂ.ಪುಷ್ಪ್ಪಾ, ಎಂ.ನಿಶಾನಿ ಜಯಣ್ಣ, ವೃತ್ತಿಪರ ನಿರ್ದೇಶಕ ಎಚ್.ನಿರಂಜನಮೂರ್ತಿ, ಕಾರ್ಯದರ್ಶಿ ಜಿ.ಎನ್.ಉಮಾಶಂಕರ್ ಇತರರಿದ್ದರು.